Index   ವಚನ - 142    Search  
 
ವಿಭೂತಿಯ ಪೂಸುವ ಪಣೆಗೆ ಬಂಡಾರವ ಪೂಸುವವರು ಹೊಲಗೇರಿಯಲ್ಲಿ ಹಣಿಚಿಕ್ಕಿಹಂದಿಯಾಗಿ ಪುಟ್ಟುವರು. ರುದ್ರಾಕ್ಷಿಯ ಧರಿಸುವ ತೋಳು ಕಂಠ ಮಸ್ತಕದಲ್ಲಿ ಯಂತ್ರವಮಾಡಿಸಿ ತಾಯಿತದಲ್ಲಿ ಕಟ್ಟುವವರು ಸುಡುಗಾಡುಸಿದ್ಧಯ್ಯರಾಗಿ ಪುಟ್ಟುವರು. ಶಿವಲಿಂಗವ ಧರಿಸುವ ಕೊರಳಿಗೆ ಬೆಳ್ಳಿಬಂಗಾರದ ತಾಯಿತದಲ್ಲಿ ವೈದ್ಯರ ಗಿಡಮೂಲಿಕೆ ಹಾಕಿಸಿ ಕಟ್ಟುವವರೆಲ್ಲ ಗೊಲ್ಲರಾಗಿ ಪುಟ್ಟುವರು. ಶಿವಮಂತ್ರವನುಚ್ಚರಿಸುವ ಜಿಹ್ವೆಯಲ್ಲಿ ಹಾವು ಚೋಳಿನ ಮಂತ್ರ ಮೊದಲಾದ ಅನೇಕ ಕುಟಿಲ ವೈದ್ಯದ ಮಂತ್ರವ ಕಲಿತು ಜಪಿಸುವವರೆಲ್ಲ ಗಾರುಡಗಾರರಾಗಿ ಪುಟ್ಟುವರು. ಗುರುಹಿರಿಯರ ಕಂಡು ಶಿರಬಾಗಿ ಶರಣೆನ್ನದವರು ಮರಳಿ ಕ್ಷೀಣಜಾತಿಯಲ್ಲಿ ಜನಿಸಿ, ನೂರೊಂದು ಕುಲ, ಹದಿನೆಂಟು ಜಾತಿಯವರಿಗೆ ಶಿರಬಾಗಿ ಶರಣುಮಾಡುವರು. ಗುರುಕೊಟ್ಟ ಇಷ್ಟಲಿಂಗದ ಪೂಜೆಯ ಬಿಟ್ಟು, ಶೈವರು ಸ್ಥಾಪಿಸಿದ ನಟ್ಟಕಲ್ಲು ಸ್ಥಾವರ ಶೈವಲಿಂಗವ ಪೂಜಿಸುವವರು, ಮರಳಿ ವಿಪ್ರ ಪಂಚಾಳ ಕುಲದವರು ಮೊದಲಾಗಿ ಅನೇಕ ಭವಿಗಳಲ್ಲಿ ಜನಿಸಿ, ಹುಲಿಗಿ, ಎಲ್ಲಿ, ಬನಶಂಕರಿ, ಕಾಳಿ, ಜಟ್ಟಿಂಗ, ಹಿರಿಯೊಡಿಯ ಲಕ್ಕಿ, ದುರ್ಗಿದೇವಿ ಮೊದಲಾದ ಬೀದಿಬಜಾರದಲ್ಲಿರುವ ಅಧಮ ಕ್ಷೀಣ ದೇವತೆಗಳ ಪೂಜಿಸುವವರು. ಜಂಗಮವ ಕಂಡು ಜರಿದು ಜಂಗುಳಿದೈವಕ್ಕೆ ಜನಿಗಿಯ ಬಿಟ್ಟು, ಒಂದ್ಹೊತ್ತು ಉಪವಾಸ ಮಾಡಿ ಮಡಿಗಳನುಟ್ಟು, ಎಡಿಯ ಕೊಟ್ಟುಂಬುವವರು ಮರಳಿ ಆ ದೇವತೆಗಳ ಸೇವಕರಾಗಿ ಪುಟ್ಟುವರು. ಅನ್ನೋದಕದ ಪೂರ್ವಾಶ್ರಯವನಳಿಯದೆ ಲಿಂಗಕ್ಕೆ ತೋರಿ ಉಂಬವರೆಲ್ಲ ಮರಳಿ ಹೆಂಡಗಾರ ಕಟುಕರಲ್ಲಿ ಜನಿಸಿ ಕಂಡ ಹೆಂಡ ಸೇವಿಸುವರು. ಇಂತಪ್ಪರಿಗೆ ಶಿವನು ಒಲಿ ಒಲಿ ಎಂದರೆ ಎಂತೊಲಿವನಯ್ಯ, ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.