Index   ವಚನ - 145    Search  
 
ಆದಿ ಅನಾದಿ ಸುರಾಳ ನಿರಾಳ ಶೂನ್ಯ ನಿಃಶೂನ್ಯದಿಂದತ್ತತ್ತಲಾದ ಘನಮಹಾಲಿಂಗವೆಂಬ ಪರಬ್ರಹ್ಮವು, ಗುರುಕರುಣದಿಂ ಬಹಿಷ್ಕರಿಸಿ ಕರಸ್ಥಲಕ್ಕೆ ಇಷ್ಟಲಿಂಗವಾಗಿ ಬರಲು ಆ ಲಿಂಗದಲ್ಲಿ ಕೃಷ್ಣಾ ಭಾಗೀರಥಿ ಮೊದಲಾದ ಅನೇಕ ತೀರ್ಥಂಗಳು, ಕಾಶಿರಾಮೇಶ್ವರ ಮೊದಲಾದ ಅನೇಕ ಕ್ಷೇತ್ರಂಗಳು, ಹಿಮಾಚಲ ಶ್ರೀಶೈಲಪರ್ವತ ಮೊದಲಾದ ಅನೇಕ ಪುಣ್ಯಶೈಲಂಗಳುಂಟೆಂದು, ತನ್ನ ಸ್ವಾನುಭಾವಮೂಲಜ್ಞಾನದಿಂ ತಿಳಿದು, ಸಕಲ ಸಂಶಯಂ ಬಿಟ್ಟು ನಿಶ್ಚಿಂತನಾಗಿ, ಮನವ ಮಹಾಘನದಲ್ಲಿರಿಸಿ ಇರಬಲ್ಲಡೆ ಆತನೇ ಅನಾದಿಸದ್ವೀರಮಹೇಶ್ವರನ ಭಕ್ತನು ನೋಡಾ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.