Index   ವಚನ - 144    Search  
 
ಪುಣ್ಯಕ್ಷೇತ್ರಯಾತ್ರೆ ಪುಣ್ಯತೀರ್ಥಸ್ನಾನವ ಮಾಡಬೇಕೆಂಬಿರಿ. ಮರ್ತ್ಯಲೋಕದ ಮಹಾಗಣಂಗಳು ನೀವು ಬಲ್ಲಾದರೆ ಪೇಳಿ, ಅರಿಯದಿದ್ದರೆ ಕೇಳಿರಯ್ಯ. ಶ್ರೀಗುರುಕಾರುಣ್ಯವ ಪಡೆದು ಲಿಂಗಾಂಗಸಂಬಂಧಿಯಾಗಿ ಸರ್ವಾಂಗಲಿಂಗಮಯವಾದ ಒಬ್ಬ ಶಿವಭಕ್ತನ ದರ್ಶನವಾದವರಿಗೆ ಅನಂತಕೋಟಿ ಪುಣ್ಯ ಫಲದೊರಕೊಂಬುವದು. ಅದೆಂತೆಂದೊಡೆ : ಆತನ ಮಂದಿರವೇ ಶಿವಲೋಕ. ಆತನ ಕಾಯವೇ ಸತ್ಯಲೋಕ. ಆತನ ಅಂಗದ ಮೇಲೆ ಇರುವ ಲಿಂಗವೇ ಅನಾದಿಪರಶಿವಲಿಂಗ, ಆತನ ಅಂಗಳವೇ ವಾರಣಾಸಿ. ಅಲ್ಲಿ ಮುನ್ನೂರಾ ಅರುವತ್ತುಕೋಟಿ ಕ್ಷೇತ್ರಂಗಳಿರುವವು. ಆತನ ಬಚ್ಚಲವೇ ಗಂಗಾತೀರ. ಅಲ್ಲಿ ಮುನ್ನೂರರುವತ್ತುಕೋಟಿ ತೀರ್ಥಂಗಳಿರ್ಪವು. ಇಂತಪ್ಪ ನಿರ್ಣಯವನು ಸ್ವಾನುಭಾವಗುರುಮುಖದಿಂ ತಿಳಿದು, ವಿಚಾರಿಸಿ ಕೊಳ್ಳಲರಿಯದೆ ತೀರ್ಥಕ್ಷೇತ್ರವೆಂದು ತಿರುಗುವ ವ್ರತಭ್ರಷ್ಟ ಅನಾಚಾರಿ ಮೂಳಹೊಲೆಯರಿಗೆ ನಾನೇನೆಂಬೆನಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.