Index   ವಚನ - 160    Search  
 
ಅಚ್ಚಪ್ರಸಾದ ನಿಚ್ಚಪ್ರಸಾದ ಸಮಯಪ್ರಸಾದ ಏಕಪ್ರಸಾದ ಎಂಬರಯ್ಯಾ. ಈ ನಾಲ್ಕು ಪ್ರಸಾದಿಗಳ ವಿವರ ಎಂತೆಂದಡೆ : ಹಲ್ಲುಕಡ್ಡಿ ದರ್ಪಣ ಮುಳ್ಳು ಸ್ತ್ರೀಸಂಭೋಗ ಮೊದಲಾದ ದಿವಾರಾತ್ರಿಯಲ್ಲಿ ಜಂಗಮಕ್ಕೆ ಸಕಲ ಪದಾರ್ಥವನು ಅರ್ಪಿಸಿ ಮರಳಿ ತಾ ಭೋಗಿಸಬಲ್ಲಾತನೆ ಅಚ್ಚಪ್ರಸಾದಿಗಳೆಂಬರು. ತ್ರಿಕಾಲದಲ್ಲಿ ನಿತ್ಯ ತಪ್ಪದೆ ಜಂಗಮವನರ್ಚಿಸಿ ಪಾದೋದಕ ಪ್ರಸಾದವ ಸಲಿಸಬಲ್ಲಾತನೆ ನಿಚ್ಚ ಪ್ರಸಾದಿಗಳೆಂಬರು. ತಮ್ಮ ಸಮಯಾಚಾರದ ಜಂಗಮವ ಕಂಡಲ್ಲಿ ಪಾದೋದಕ ಪ್ರಸಾದ ಸಲಿಸಬಲ್ಲಾತನೆ ಸಮಯಪ್ರಸಾದಿಗಳೆಂಬರು. ಶ್ರೀಗುರೂಪದೇಶವ ಪಡೆದ ಸಮಯದಲ್ಲಿ ಪಾದೋದಕ ಪ್ರಸಾದವ ಸೇವಿಸಿ ಮರಳಿ ಪಾದೋದಕಪ್ರಸಾದವ ಸೇವಿಸದಾತನೆ ಏಕಪ್ರಸಾದಿಗಳೆಂಬರು. ಇಂತೀ ಚತುರ್ವಿಧಪ್ರಸಾದಿಗಳು ನಮ್ಮ ನಿರ್ಮಾಯಪ್ರಭುವಿಂಗೆ ಸಲ್ಲರು ಅದೇನು ಕಾರಣವೆಂದಡೆ, ಇವರು ಕರ್ಮಕಾಂಡಿಗಳಾದ ಕಾರಣ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.