Index   ವಚನ - 159    Search  
 
ಅಚ್ಚಪ್ರಸಾದಿಗಳೆಂದು ಹೆಸರಿಟ್ಟುಕೊಂಡು ಪ್ರಸಾದಿಗಳ ಕಂಡರೆ ಅಗಲನೆಲ್ಲವ ನೀರಿನಿಂದ ತೊಳೆತೊಳೆದು ಮುಸುರಿಗೆ ಬಿಟ್ಟ ಎಮ್ಮಿಯಂತೆ ಕುಡಿದು, ಆಯತಮಾಡಿ ಅಗಲನೆಲ್ಲವ ನೆಕ್ಕಿ ನೀರ ತೊಂಬಲವೆಲ್ಲ ತೆಗೆವರು. ಆರೂ ಇಲ್ಲದ ವೇಳೆಯಲ್ಲಿ ರಣಬೀರರಂತೆ ಕೂಳ ತಿಂದು ಚಲ್ಲಾಡಿ, ತುದಿಹಸ್ತವ ತೊಳೆದು ಹೋಗುವವರಿಗೆ ಅಚ್ಚಪ್ರಸಾದವೆಲ್ಲಿಹುದಯ್ಯ ? ದೇಹಕ್ಕೆ ವ್ಯಾಧಿ ಸಂಘಟಿಸಿದಲ್ಲಿ ತನ್ನ ಖಬರು ತನಗೆ ವಿಸ್ಮೃತಿಯಾಗಲು ಆ ವೇಳೆಯಲ್ಲಿ ಅನ್ನ ಉದಕವ ಆರು ನೀಡಿದಡೆಯೂ ಜೀವನ ಕಕಲಾತಿಗೆ ತಾ ಮಲಗಿರ್ದ ಹಾಸಿಗೆಯಲ್ಲಿ ಏಳದೆ ಮಲಗಿರ್ದಲ್ಲಿ ಅನ್ನ ಉದಕವ ತಿಂಬುವವರಿಗೆ ಎಲ್ಲಿಹುದಯ್ಯ ಅಚ್ಚಪ್ರಸಾದ ? ಇಂತಪ್ಪ ವ್ರತಭ್ರಷ್ಟ ಸೂಳೆಯಮಕ್ಕಳು ನುಚ್ಚಬಡಕರಲ್ಲದೆ ಇವರು ಅಚ್ಚಪ್ರಸಾದಿಗಳಾಗಬಲ್ಲರೆ ? ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.