Index   ವಚನ - 186    Search  
 
ಪ್ರಸಾದ ಪ್ರಸಾದವೆಂದು ನುಡಿಯಬಹುದಲ್ಲದೆ, ಪ್ರಸಾದದ ಘನವನಾರು ಬಲ್ಲರಯ್ಯಾ ? ಪ್ರಸಾದವೆಂಬುದು ಪರಕ್ಕೆಪರವಾಗಿರ್ಪುದು. ಪ್ರಸಾದವೆಂಬುದು ಪರತರ ಮುಕ್ತಿದೋರುವುದು. ಪ್ರಸಾದವೆಂಬುದು ಪರಮಪದವಿಯನೀವುದು. ಪ್ರಸಾದವೆಂಬುದು ಪರಂಜ್ಯೋತಿಸ್ವರೂಪವನುಳ್ಳುದು. ಪ್ರಸಾದವೆಂಬುದು ಪರಬ್ರಹ್ಮನಾಮವುಳ್ಳದು. ಪ್ರಸಾದವೆಂಬುದು ಮಹಾಜ್ಞಾನಪ್ರಕಾಶವನುಳ್ಳುದು. ಪ್ರಸಾದವೆಂಬುದು ಸ್ವಾನುಭಾವಸಮ್ಯಜ್ಞಾನ, ಜ್ಞಾನ, ಸುಜ್ಞಾನ, ಮಹಾಜ್ಞಾನ, ಶಿವಜ್ಞಾನವೆಂಬ ಷಡ್ವಿದಜ್ಞಾನಸ್ವರೂಪವಾದ ಕರಕಮಲದಲ್ಲಿ ಪ್ರಕಾಶಮಯವಾಗಿ ತೋರುವ ಘನಮಹಾಲಿಂಗವು. ಅಂತಪ್ಪ ಘನಮಹಾ ಇಷ್ಟಬ್ರಹ್ಮದಲ್ಲಿ ಎರಡಳಿದು ಕೂಡಿ ಬೆರೆದು ಬೇರಿಲ್ಲದೆ ಇರಬಲ್ಲಡೆ ಆತನೆ ಅಚ್ಚಪ್ರಸಾದಿ, ನಿಚ್ಚಪ್ರಸಾದಿ, ಸಮಯಪ್ರಸಾದಿ, ಏಕಪ್ರಸಾದಿ ಇಂತೀ ಚತುರ್ವಿಧಪ್ರಸಾದದೇಕಸ್ವರೂಪಾದ ಮಹಕ್ಕೆ ಮಹವಾದ, ಘನಕ್ಕೆ ಘನವಾದ ಪರಶಿವನ ಮಹಾಪ್ರಸಾದಿಯೆಂದನು ಕಾಣಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.