Index   ವಚನ - 190    Search  
 
ಇಂತಪ್ಪ ನಿರ್ಣಯವನು ಸ್ವಾನುಭಾವ ಗುರುಮುಖದಿಂ ತಿಳಿದು ವಿಚಾರಿಸಿಕೊಳ್ಳದೆ, ಭಿನ್ನಗುರುವಿನ ಕೈಯಲ್ಲಿ ಉಪದೇಶವ ಹಡದು, ಲಿಂಗವ ಪಡಕೊಂಡು ಗುರುಕಾರುಣ್ಯ ಉಳ್ಳವರೆಂದು ಲೋಕದ ಮುಂದೆ ಬೊಗಳುವ ಮೂಳಹೊಲೆಯರ ಕಟಬಾಯ ಸೀಳಿ ನಿಮ್ಮ ಗಣಂಗಳ ಪಾದರಕ್ಷೆಯಿಂದ ಹೊಡೆದಡೆ, ಎನ್ನ ಸಿಟ್ಟು ಮಾಣದು. ಅದೇನು ಕಾರಣವೆಂದಡೆ, ನೀವು ಪಡಕೊಂಡ ಗುರುವಿಗೆ ಗುರುಕಾರುಣ್ಯವಿಲ್ಲ. ಅವನ ಗುರುವಿಗೆ ಮುನ್ನವೇ ಗುರುಕಾರುಣ್ಯವಿಲ್ಲ. ನಿಮಗಿನ್ನಾವ ಕಡೆಯ ಗುರುಕಾರುಣ್ಯವೊ? ಎಲೆ ಮರುಳ ಮಾನವರಿರಾ ಗುರುಕಾರುಣ್ಯವಾದ ಬಳಿಕ ತನು-ಮನ-ಧನದಾಸೆ ಹಿಂದುಳಿದು ಗುರು-ಲಿಂಗ-ಜಂಗಮದಾಶೆ ಮುಂದುಗೊಂಡಿರಬೇಕು. ಗುರುಕಾರುಣ್ಯವಾದರೆ ಆಣವಮಲ, ಮಾಯಾಮಲ, ಕಾರ್ಮಿಕಮಲಗಳ ಜರಿದು ಇಷ್ಟ-ಪ್ರಾಣ-ಭಾವದಲ್ಲಿ ಭರಿತವಾಗಬೇಕು. ಗುರುಕಾರುಣ್ಯವಾದಡೆ ಲಿಂಗವು ಆರಿಗೂ ತೋರದಿರಬೇಕು. ಇಷ್ಟುಳ್ಳಾತನೆ ಗುರುಕಾರುಣ್ಯ ಉಳ್ಳವನೆಂದನಯ್ಯಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ