Index   ವಚನ - 203    Search  
 
ಇಂತಪ್ಪ ವಿಚಾರವ ತಿಳಿದು ಉಪದೇಶವ ಮಾಡಬಲ್ಲಾತನೇ ಗುರುವೆಂಬೆ. ಇಂತೀ ಭೇದವ ತಿಳಿದು ಉಪದೇಶವ ಕೊಳಬಲ್ಲಡಾತನೇ ಶಿಷ್ಯನೆಂಬೆ. ಇಂತಪ್ಪ ನಿರ್ಣಯವ ತಿಳಿದು ಪಾದೋದಕ ಪ್ರಸಾದವ ಕೊಡಬಲ್ಲಡಾತನೇ ಜಂಗಮಲಿಂಗಿಯೆಂಬೆ. ಇಂತೀ ವಿಚಾರವನಳವಡಿಸಿಕೊಂಡು ಪಾದೋದಕ ಪ್ರಸಾದವ ಕೊಳಬಲ್ಲಡಾತನೇ ಭಕ್ತನೆಂಬೆ. ಇಂತಪ್ಪ ಶಿವಾಚಾರದ ಬಗೆಯನು ತಿಳಿಯದೆ ಮಾಡುವ ಮಾಟವೆಲ್ಲಾ ಹೊಳ್ಳಕುಟ್ಟಿ, ಕೈ ನೊಂದು ಗಾಳಿಗೆ ತೂರಿದಂತಾಯಿತಯ್ಯಾ. ಈ ಲೋಕದೊಳಗೆ ಗುರುಶಿಷ್ಯ, ದೇವ ಭಕ್ತರೆಂಬುಭಯರ ಮೇಳಾಪವ ನೋಡೆಂದ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.