Index   ವಚನ - 205    Search  
 
ಎನಗೆ ಭಕ್ತನೆಂಬರು, ಎನ್ನ ಭಕ್ತಿಚಾರಿತ್ರವ ಪೇಳ್ವೆ ಕೇಳಿರಯ್ಯ. ಎನ್ನ ಮತ್ಪ್ರಾಣನಾಥಲಿಂಗತಂದೆ ಗುರುಲಿಂಗಜಂಗಮದ ಭಕ್ತಿಯೆಂದಡೆ ಎನ್ನ ತನುಮನವು ಕುಗ್ಗುವುದು. ಮಾರಿ ಮಸಣಿಯ ಭಕ್ತಿಯೆಂದಡೆ ನದಿ ಸರ್ಪನಂತೆ ಎನ್ನ ತನು-ಮನವು ಉಬ್ಬುವುದು. ಶಿವಶಾಸ್ತ್ರ, ಶಿವಾನುಭಾವ, ಶಿವಮಂತ್ರಬೋಧೆ ಎಂದಡೆ ಎನ್ನ ಶ್ರೋತ್ರಂಗಳು ಲಾಲಿಸವು. ಕುಟಿಲ, ಕುಹಕ, ಸಟೆಯ ಶಾಸ್ತ್ರ, ಕಪಟ ಮಂತ್ರ ಯಂತ್ರ ತಂತ್ರಗಳೆಂದಡೆ ಎನ್ನುಭಯ ಶ್ರೋತ್ರಂಗಳು ಚೈತ್ರ ವೈಶಾಖ ಮಾಸದಲ್ಲಿ ಮೊಲ್ಲೆ ಮೊಗ್ಗೆ ಉದಯಕ್ಕೆ ಅರಳಿ ಹೇಗೆ ಎಸೆಯುವುದು ಹಾಗೆ ವಿಕಸಿತವಾಗಿ, ಶಬ್ದವಿಷಯ ಎಸೆವುದು. ಹರಪೂಜೆ ಗುರುಪೂಜೆ ಲಿಂಗನಿರೀಕ್ಷಣವೆಂದಡೆ ಎನ್ನ ನೇತ್ರಂಗಳು ನಿರೀಕ್ಷಿಸವು. ಆಟ, ನೋಟ, ಸೂಳೆಯರ ಬೇಟ, ಕನ್ಯಾಸ್ತ್ರೀಯರ ರೂಪಲಾವಣ್ಯವೆಂದಡೆ ಎನ್ನ ನೇತ್ರದ ರೂಪುವಿಷಯವು ಬೇಂಟೆಯ ಶ್ವಾನನಂತೆ ಹರಿಯುತಿಪ್ಪುದು. ಗುರುಲಿಂಗಜಂಗಮದ ತೀರ್ಥಪ್ರಸಾದ ಸೇವಿಸೆಂದಡೆ ಎನ್ನ ಜಿಹ್ವೆಯು ಸೇವಿಸದು. ದಾಸಿ ವೇಸಿಯರ ಬಾಯ ತಾಂಬೂಲವೆಂದಡೆ ಎನ್ನ ಜಿಹ್ವೇಂದ್ರಿಯ ರುಚಿವಿಷಯವು ಕೀಳುಮಾಂಸಕ್ಕೆ ಮೆಚ್ಚಿ ಹರಿದಂತೆ ಹರಿಯುತ್ತಿಪ್ಪುದು. ಗುರುಲಿಂಗಜಂಗಮದ ಪಾದಸೇವೆಯೆಂದಡೆ ಎನ್ನ ತ್ವಕ್ಕು ಜಾಡ್ಯವಾಗಿ ಆಲಿಸದು. ಸೂಳಿಢಾಳಿಯರ ಅಂಗಸೇವನೆಯೆಂದಡೆ ಎನ್ನ ತ್ವಕ್ಕು ಉಡ ಉಬ್ಬಿದಂತೆ ಉಬ್ಬುವದು. ಗುರುಲಿಂಗಜಂಗಮವು ಧರಿಸಿದ ಪುಷ್ಪ ಪತ್ರಿ ಪರಿಮಳ ಸುಗಂಧ ಚಂದನದ ಸದ್ವಾಸನೆ ಎಂದಡೆ ಎನ್ನ ಘ್ರಾಣವು ಮುಡಿಯದು. ವೇಶ್ಯೆ, ದಾಸಿ, ಜಾರಸ್ತ್ರೀಯರು ಧರಿಸಿದ ಪುಷ್ಪ ಪರಿಮಳ ಗಂಧ ಚಂದನದ ಸದ್ವಾಸನೆಯೆಂದಡೆ ಎನ್ನ ಘ್ರಾಣವು ಸಂಪಿಗೆಯರಳಿಗೆ ಭ್ರಮರ ಎರಗಿದಂತೆ ಎರಗುವದು. ಇಂತಪ್ಪ ಗುಪ್ತಪಾತಕವಾದ ಗುರುದ್ರೋಹಿಗೆ ಗುರುಲಿಂಗಜಂಗಮಭಕ್ತನೆಂದಡೆ ನಗುವರಯ್ಯ ನಿಮ್ಮ ಶರಣರು. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ