ಲಿಂಗನಿಷ್ಠೆಯುಳ್ಳ ವೀರಶೈವ ಮಹೇಶ್ವರರು
ಸಕಲಪದಾರ್ಥವ ಲಿಂಗಕ್ಕೆ ಕೊಡದೆ,
ಎನ್ನಂಗಕ್ಕೆ ಕೊಂಡಡೆ ವ್ರತಕ್ಕೆ ಭಂಗವೆಂದೆಂಬಿರಯ್ಯಾ
ಉದಯಕಾಲದಲ್ಲಿ ಶೌಚಾಚಮನವ ಮಾಡಿ
ಅಗ್ಗಣಿಯ ಬಳಸುವಿರಿ,
ಆವಾಗ ಅವ ಲಿಂಗಕ್ಕೆ ಕೊಡುವಿರಿ.
ಆ ಮೇಲೆ ಹಳ್ಳ ಕೊಳ್ಳ ಕೆರೆ ಬಾವಿ ನದಿಗಳಿಗೆ ಹೋಗಿ,
ಮೃತ್ತಿಕಾದಿಂದ ಹಸ್ತಪಾದಕ್ಕೆ ಮೂರು ವೇಳೆ ಪೂಸಿ
ಮೂರು ವೇಳೆ ತೊಳೆವಿರಿ.
ಆವಾಗ ಅವ ಲಿಂಗಕ್ಕೆ ಕೊಡುವಿರಿ.
ಆ ಮೇಲೆ ಶೌಚಕ್ಕೆ ಒಯ್ದ ಪಾತ್ರೆಯ
ಮೃತ್ತಿಕಾದಿಂದ ತೊಳೆದು,
ತಾ ಉಟ್ಟು ತೊಟ್ಟ ಪಾವಡಪಂಕಿಗಳ ನೀರಿನಲ್ಲಿ ಸೆಳೆದು
ಗಾಳಿ ಬಿಸಲಾಗ ಹಾಕುವಿರಿ.
ಆವಾಗ ಅವ ಲಿಂಗಕ್ಕೆ ಕೊಡುವಿರಿ.
ಇಂತೀ ಎಲ್ಲವನು ಶುಚಿ ಮಾಡಿ
ಜ್ಯಾಲಿ ಬೊಬ್ಬಲಿ ಉತ್ರಾಣಿಕಡ್ಡಿ ಮೊದಲಾದ ಕಡ್ಡಿಗಳ ತಂದು
ಆವಾಗ ತಮ್ಮ ಅಂಗದ ಮೇಲಣ ಲಿಂಗವ ತೆಗೆದು
ಅಂಗೈಯಲ್ಲಿ ಪಿಡಿದು, ಆ ಲಿಂಗಕ್ಕೆ ಮಜ್ಜನ ಮಾಡಿ,
ಮರಳಿ ತಾ ಮುಖಮಜ್ಜನವ ಮಾಡಿ,
ಆ ಮೇಲೆ ತಮ್ಮ ಅಂಗೈಯೊಳಗಿನ
ಇಷ್ಟಲಿಂಗಕ್ಕೆ ಆ ಕಡ್ಡಿಯ ತೋರಿ,
ತೋರಿದಂಥ ಧಾವನೆಯ ಮಾಡುವರು.
ಲಿಂಗದ ಗೊತ್ತು ತಮಗಿಲ್ಲ ;
ತಮ್ಮ ಅಂಗದ ಗೊತ್ತು ಲಿಂಗಕ್ಕಿಲ್ಲ .
ಇಂತಪ್ಪ ಭಿನ್ನವಿಚಾರವನುಳ್ಳ ಮಂಗಮನುಜರಿಗೆ
ಲಿಂಗನೈಷ್ಠೆಯುಳ್ಳ ವೀರಮಹೇಶ್ವರರೆಂದಡೆ
ನಿಮ್ಮ ಶಿವಶರಣರು ಮುಖವೆತ್ತಿ ನೋಡರು.
ಮನದೆರೆದು ಮಾತನಾಡರು,
ತಮ್ಮೊಳಗೆ ತಾವೇ ಮುಗುಳುನಗೆಯ ನಕ್ಕು
ಸುಮ್ಮನಿರುವರು ನೋಡಾ,
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ.