ಈ ಲೌಕಿಕದ ಮಧ್ಯದಲ್ಲಿ ಜೀವಾತ್ಮರು ದಿನಚರಿ,
ವಾರ, ಮಾಸ, ಚತುದರ್ಶಿಯಲ್ಲಿ
ಉಪವಾಸ ಮಾಡುವ ಕ್ರಮವ ಪೇಳ್ವೆ.
ಅದೆಂತೆಂದಡೆ :
ದಿನಚರಿ ವಾರದೊಳಗೆ ಸೋಮವಾರ ವ್ರತವುಳ್ಳವರು
ಆ ದಿವಸ ಉದಯದಿಂ ಮೂರುಪ್ರಹರ
ವೇಳೆ ಪರಿಯಂತರವಾಗಿ
ಉಪವಾಸವ ಮಾಡಿ ಆ ದಿವಸಕ್ಕಿಂತು ಆ ವಾರ ದಿವಸ
ಆವ ಪದಾರ್ಥವಾದಡೆಯು ನಿರ್ಮಳ ಪಾಕವ ಮಾಡಿಸಿ
ಕೆರೆ, ಬಾವಿ, ಹಳ್ಳ, ಹೊಳೆಗಳಿಗೆ ಹೋಗಿ,
ಮಜ್ಜನವ ನೀಡಿ ಪತ್ರಿಪುಷ್ಪವ ತಂದು
ತನ್ನ ಲಿಂಗಪೂಜೆಯ ಮಾಡಿ,
ಗ್ರಾಮದ ಹೊರಗೆ ಒಂದು ಸ್ಥಾವರಲಿಂಗದ
ದೇವಾಲಯಕ್ಕೆ ಹೋಗಿ ನಮಸ್ಕಾರವ ಮಾಡಿ,
ಮರಳಿ ತಮ್ಮ ಗ್ರಹಕ್ಕೆ ಬಂದು
ಆ ಸ್ಥಾವರಲಿಂಗಕ್ಕೆ ನೈವೇದ್ಯವ ಕಳಿಸಿ
ಆ ಮೇಲೆ ಜಂಗಮವ ಕರಿಸಿ ಅರ್ಚಿಸಿ,
ಪಾದೋದಕ ಸೇವಿಸಿ,
ಆ ಜಂಗಮಕ್ಕೆ ಉತ್ತಮವಾದ ಪದಾರ್ಥವ ಸ್ವಲ್ಪ ಎಡೆ ಮಾಡಿಸಿ
ತನ್ನ ಹರಿವಾಣದಲ್ಲಿ ಅರಲು ತುಂಬಿದ
ಹೆಡಿಗೆಯಂತೆ ಒಟ್ಟಿಸಿಕೊಂಡು
ಮನಬಂದಪರಿಯಲ್ಲಿ ಎರಡು ವೇಳ್ಯದಾಹಾರ
ಒಂದುವೇಳೆಯಲ್ಲಿ ರಣವೀರರಂತೆ
ತಿಂದು ತಿಂದು ಒಡಲ ತುಂಬಿಕೊಂಡು
ನಾವು ಸೋಮವಾರ ಒಂದೊತ್ತು
ಉಪವಾಸವ್ರತವುಳ್ಳವರೆಂದು
ಪರರಮುಂದೆ ಬೊಗಳುವರಯ್ಯ.
ಇಂತಪ್ಪ ವ್ರತಭ್ರಷ್ಟವುಳ್ಳ ಮಂಗಮನುಜರಿಗೆ
ವೀರಮಾಹೇಶ್ವರರೆಂದಡೆ ಮೆಚ್ಚರಯ್ಯಾ
ನಿಮ್ಮ ಶಿವಜ್ಞಾನಿಗಳಾದ ಶಿವಶರಣರು
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ.