Index   ವಚನ - 210    Search  
 
ದ್ವಾದಶಮಾಸದೊಳಗೆ ಶ್ರಾವಣಮಾಸದ ಫಲಪುಣ್ಯ ಮಹಾದೊಡ್ಡದೆಂದು, ವೇದ, ಪುರಾಣ, ಶ್ರುತಿವಾಕ್ಯಗಳಿಂದ ಕೇಳಿ, ಅಂತಪ್ಪ ಶ್ರಾವಣಮಾಸ ತಿಂಗಳಪರಿಯಂತರವಾಗಿ, ನಿತ್ಯದಲ್ಲಿ ವ್ರತವನಾಚರಿಸುವರ ಆಚರಣೆಯ ಪೇಳ್ವೆ ಅದೆಂತೆಂದಡೆ : ಶ್ರಾವಣಮಾಸ ಪಾಡ್ಯದಿವಸ ಮೊದಲು ಮಾಡಿ ನಿತ್ಯದಲಿ ಒಬ್ಬ ಜಂಗಮದ ಪಾದವ ಪಿಡಿದು, ಪತ್ರಿ ಪುಷ್ಪ ನಿತ್ಯದಲ್ಲಿ ತಂದು, ಪಾದಪೂಜೆಯ ಮಾಡಿ, ಪಾದೋದಕ ಪ್ರಸಾದವ ಕೊಂಡು ಆ ಜಂಗಮಸಹಿತನಾಗಿ ಮೃಷ್ಟಾನ್ನಭೋಜನವ ಹಾ ಹಾ ಎಂದು ಒಟ್ಟಿಸಿಕೊಂಡು ಒಡಲತುಂಬಿಸಿಕೊಂಡು, ಮತ್ತೆ ಮರಳಿ ಸಾಯಂಕಾಲಕ್ಕೆ ಫಲಹಾರವೆಂದು ಮಾಡಿಸಿ ತಿಂದು, ನಾವು ಶ್ರಾವಣಮಾಸ ಒಂದೊತ್ತು ಉಪವಾಸ, ನಿತ್ಯದಲ್ಲಿ ಜಂಗಮದ ತೀರ್ಥಪ್ರಸಾದ ತಪ್ಪದೆ ಕೊಂಬ ವ್ರತವುಳ್ಳವರೆಂದು ತಮ್ಮ ಬಿಂಕದ ಮಾತ ಮೂಢಾತ್ಮರ ಮುಂದೆ ಬೀರುವರಯ್ಯ. ಇಂತಪ್ಪ ತಾಮಸಗುಣವುಳ್ಳ ಅಹಂಕಾರಿಗೆ ವೀರಮಾಹೇಶ್ವರರೆಂದಡೆ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭು ಮೆಚ್ಚುವನೆ ? ಮೆಚ್ಚನಯ್ಯ ನರಕದಲ್ಲಿಕ್ಕೆಂದ ನೋಡಾ.