ಬಯಲ ಪಟ್ಟಣದ ರಾಜಕುಮಾರನು
ಮಲೆಯಪುರದಲ್ಲಿ ಶಿಕಾರಿಯ ಮಾಡಲು,
ಆ ಪಟ್ಟಣದ ಬೀದಿಬಾಜಾರದೊಳಗೆ
ಪದ್ಮಜಾತಿನಿಯೆಂಬ ಸ್ತ್ರೀ ಇರುವಳು.
ಆ ಸ್ತ್ರೀಯ ಕೈಯೊಳಗಿನ ಕೋತಿಯ ವಿಲಾಸವನು,
ಆ ಸ್ತ್ರೀಯ ರೂಪಲಾವಣ್ಯವನು, ರಾಜಕುಮಾರನು ಕಂಡು,
ಬೆರಗಾಗಿ ಮರುಳುಗೊಂಡು,
ಆ ನಾರಿಯ ವಾಸದೊಳಗೆ ಬಹುಕಾಲವಿರ್ದು,
ಪಟ್ಟಣ ಪಾಳೆಯಲ್ಲಿ ಚರಿಸುತ್ತಿರಲು,
ಅತ್ತಳ ಊರಿಂದ ಜೋಗಿ ಬಂದು ಪತ್ರವ ಕೊಡಲಾಗಿ
ಆ ಪಟ್ಟಣ ಬೆದರಿ, ಪಾಳ್ಯ ಅಳಿದು,
ಪಾಳ್ಯದ ನಾಯಕರು ಪಲಾಯನವಾಗಿ,
ನಾರಿಯಮುಖ ವಿಕಾರವಾಗಿ,
ಬಹುವರ್ಣದ ಕೋತಿ ಏಕವರ್ಣವಾಗಿ,
ಆ ಹಸ್ತದೊಳಗಿನ ಪತ್ರವ ಸುಕುಮಾರ ನೋಡಿ,
ಅಗ್ನಿಸ್ಪರ್ಶದ ಬೆಣ್ಣಿಯಂತೆ,
ಜ್ಯೋತಿಯ ಸಂಗದ ಕರ್ಪೂರದಂತೆ,
ಆ ಪತ್ರದಲ್ಲಿ ನಿರ್ವಯಲಾದುದು ಸೋಜಿಗ ಸೋಜಿಗವೆಂದನು.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ.