Index   ವಚನ - 239    Search  
 
ಪ್ರಾಣಲಿಂಗಿಗೆ ಚತುರ್ವಿಧಭಕ್ತಿಯಿಂದ ಗುರುವಿಗೆ ತನುವ ದಂಡಿಸಬೇಕೆಂಬ ಮಮಕಾರವುಂಟೆ ? ಪ್ರಾಣಲಿಂಗಿಗೆ ಅನ್ನ ವಸ್ತ್ರ ಧನ ಧಾನ್ಯ ಮೊದಲಾದ ಹದಿನೆಂಟು ಜೀನಸಿನ ಧಾನ್ಯವ ಜಂಗಮಕ್ಕೆ ನೀಡಿ ತೃಪ್ತಿಯಬಡಿಸಿ ಆತ್ಮನ ಬಳಲಿಸಿ, ಆ ಜಂಗಮದ ಪಾದೋದಕ ಪ್ರಸಾದವ ಸೇವಿಸಬೇಕೆಂಬ ಮಮಕಾರವುಂಟೆ ? ಇಂತೀ ತ್ರಿಮೂರ್ತಿಗಳಲ್ಲಿ ಪಾದೋದಕ, ಪ್ರಸಾದದ ಮೇಲಣ ಮಮಕಾರವನಳಿದುಳಿದಾತನೇ ಪ್ರಾಣಲಿಂಗಿ. ಮತ್ತಂ- ಅಂತಪ್ಪ ತ್ರೈಮೂರ್ತಿಗಳ ಪಾದೋದಕ ಪ್ರಸಾದದ ಮೇಲಣ ಮಮಕಾರ ನಿಮಿಷ ನಿಮಿಷಾರ್ಧವನಗಲದಿರ್ಪಾತನೇ ಅಚ್ಚ ಪ್ರಾಣಲಿಂಗಿ ನಿಜಲಿಂಗೈಕ್ಯ. ಇಂತೀ ಉಭಯದ ಭೇದವ ತಿಳಿಯಬಲ್ಲರೆ ಶಿವಜ್ಞಾನಿಗಳಾದ ಪರಶಿವಯೋಗಿಗಳೆಂದನಯ್ಯಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.