Index   ವಚನ - 250    Search  
 
ಇಂತಪ್ಪ ವಿರಕ್ತನ ನಿಲುಕಡೆಯ ದೇವ ದಾನವ ಮಾನವರು ಮೊದಲಾದ ಸಕಲಜೀವಾತ್ಮರು ತಿಳಿಯದೆ ವೇಷವ ಧರಿಸಿ, ಗ್ರಾಸಕ್ಕೆ ತಿರುಗುವ ಹೇಸಿಗಳ್ಳರ ನಾನೇನೆಂಬೆನಯ್ಯಾ ? ಇಂತಪ್ಪ ವಿರಕ್ತನ ನಿಲುಕಡೆಯ ಬಲ್ಲವರು ಆರೆಂದಡೆ ಸುಜ್ಞಾನೋದಯವಾಗಿ, ಶ್ರೀಗುರುಕಾರುಣ್ಯ ಪಡೆದು ಲಿಂಗಾಂಗಸಂಬಂಧಿಗಳಾದ ವೀರಮಾಹೇಶ್ವರರಾಗಲಿ ಅಥವಾ ಭಕ್ತಗಣಂಗಳಾಗಲಿ ಅಲ್ಲದೆ ವಿಪ್ರಮೊದಲು ಶ್ವಪಚಕಡೆಯಾಗಿ ಆವ ಜಾತಿಯಲ್ಲಿ ಆವನಾದಡೇನು ಸುಜ್ಞಾನೋದಯವಾದ ಜ್ಞಾನಕಲಾತ್ಮರು ಬಲ್ಲರಲ್ಲದೆ ಮಿಕ್ಕಿನ ಭಿನ್ನಭಾವಿಗಳಾದ ವೇದಾಂತಿ, ಸಿದ್ಧಾಂತಿ ಯೋಗಮಾರ್ಗಿಗಳು ಮೊದಲಾದ ಕರ್ಮಕಾಂಡಿಗಳಾದ ವೇಷಧಾರಿಗಳೆತ್ತ ಬಲ್ಲರಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ ?