Index   ವಚನ - 261    Search  
 
ಹೆಂಡದ ಹರವಿಗೆ ಹಾಲಹರವಿಯ ಹೋಲಿಸಿದರೆ, ಆ ಹೆಂಡದ ಹರವಿ ಹಾಲಹರವಿಯಾಗಬಲ್ಲುದೆ ? ಮದ್ಯಪಾನದ ಘಟಕ್ಕೆ ಘೃತದಘಟ ಹೋಲಿಸಿದರೆ ಆ ಮದ್ಯಪಾನದ ಘಟ ಘೃತಘಟವಾಗಬಲ್ಲುದೆ ? ಆಡಿನ ಕೊರಳಮೊಲೆಗೆ ಆಕಳಮೊಲೆಯ ಹೋಲಿಸಿದರೆ ಆ ಆಡಿನ ಕೊರಳ ಮೊಲೆ ಆಕಳ ಮೊಲೆಯಾಗಬಲ್ಲುದೆ ? ಗುಲಗಂಜಿಗೆ ಮಾಣಿಕವ ಹೋಲಿಸಿದರೆ ಆ ಗುಲಗಂಜಿ ಮಾಣಿಕವಾಗಬಲ್ಲುದೆ ? ವಜ್ರದ ಪಾಷಾಣಕ್ಕೆ ರಂಗೋಲಿಯಕಲ್ಲು ಹೋಲಿಸಿದರೆ, ಆ ರಂಗೋಲಿಯಕಲ್ಲು ವಜ್ರವಾಗಬಲ್ಲುದೆ ? ಬಿಳಿಹೂಲಿಗೆ ಮೌಕ್ತಿಕವ ಹೋಲಿಸಿದರೆ ಆ ಬಿಳಿಹೂಲಿಯ ಹಣ್ಣು ಮುತ್ತಾಗಬಲ್ಲುದೆ ? ಇಂತೀ ದೃಷ್ಟಾಂತದಂತೆ ಲೋಕಮಧ್ಯದಲ್ಲಿ ಜೀವಾತ್ಮರು ಪಂಚಭೂತಮಿಶ್ರವಾದ ಮಿಥ್ಯದೇಹವ ಧರಿಸಿರ್ಪರು. ಹಾಗೆ ಸುಜ್ಞಾನೋದಯವಾಗಿ- ಶ್ರೀಗುರುಕಾರುಣ್ಯದಿಂ ಸರ್ವಾಂಗಲಿಂಗಸಂಬಂಧಿಗಳಾದ ಶಿವಶರಣರು ಪಂಚಭೂತಮಿಶ್ರವಾದ ಮಿಥ್ಯದೇಹವ ಧರಿಸಿರ್ಪರು. ಇದು ಕಾರಣ ಅಂತಪ್ಪ ಭಿನ್ನಜ್ಞಾನಿಗಳಾದ ಜೀವಾತ್ಮರಿಗೆ ಸುಜ್ಞಾನಿಗಳಾದ ಶಿವಶರಣರ ಹೋಲಿಸಿದರೆ ಆ ಕಡುಪಾತಕಿ ಜಡಜೀವಿಗಳು ಶಿವಜ್ಞಾನಸಂಪನ್ನರಾದ ಶರಣಜನಂಗಳಾಗಬಲ್ಲರೆ ? ಆಗಲರಿಯರು ಎಂದನಯ್ಯಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.