Index   ವಚನ - 262    Search  
 
ಹಾಲುಕುಡಿದ ಶಿಶು ಸತ್ತು ವಿಷಕುಡಿದ ಶಿಶು ಬದುಕಿದುದ ಕಂಡೆ. ಬೆಣ್ಣೆಯ ತಿಂದ ಶಿಶು ಸತ್ತು ಕೆಂಡವ ತಿಂದ ಶಿಶು ಬದುಕಿದುದ ಕಂಡೆ. ಉಂಡಾಡುವ ಶಿಶು ಸತ್ತು ಉಣ್ಣದೆ ಓಡಾಡುವ ಶಿಶು ಬದುಕಿದುದ ಕಂಡೆ. ಅಂಗೈಯೊಳಗಣ ಶಿಶು ಸತ್ತು ಬೀದಿಬಾಜಾರದಲ್ಲಿರುವ ಶಿಶು ಬದುಕಿದುದ ಕಂಡೆ. ಬೆಳದಿಂಗಳೊಳಗಿನ ಶಿಶು ಸತ್ತು ಬಿಸಿಲೊಳಗಿನ ಶಿಶು ಬದುಕಿದುದ ಕಂಡೆ. ಅರಮನೆಯೊಳಗಣ ಅರಸಿಯ ಶಿಶು ಸತ್ತು ಊರೊಳಗಣ ದಾಸಿಯ ಶಿಶು ಬದುಕಿದುದ ಕಂಡೆ. ಹುಟ್ಟಿದ ಶಿಶು ಬೇನೆಯಿಲ್ಲದೆ ಸತ್ತು ಹುಟ್ಟದೆ ಬೇನೆ ಹತ್ತಿದ ಶಿಶು ಬದುಕಿದುದ ಕಂಡೆ. ಈ ಉಭಯ ಭೇದವ ಬಲ್ಲ ಶಿಶು ಚನ್ನಮಲ್ಲಯ್ಯನಲ್ಲಿ ಬಯಲಾಯಿತ್ತು. ಮತ್ತಂ, ಈ ಉಭಯ ನಿರ್ಣಯವನರಿಯದ ಶಿಶು ಮಹಾಮಲೆಯಲ್ಲಿ ಬಯಲಾಯಿತ್ತು. ಇದರಂದಚಂದ ನಿಮ್ಮ ಶರಣರೇ ಬಲ್ಲರು ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.