Index   ವಚನ - 270    Search  
 
ಮೋಟ ಮೂಕಾರ್ತಿಯ ಮದುವೆಗೆ ಮುಪ್ಪುರದರಸುಗಳು ನಿಬ್ಬಣ ಹೋದುದ ಕಂಡೆ. ಐವರರಸರ ಸತಿಯರು ಆರತಿಯ ಪಿಡಿದುದ ಕಂಡೆ. ಮೋಟಂಗೆ ಸೇಸೆಯನಿಕ್ಕಿ ತಾಳಿಯ ಹರಿದು ತಾಳಿಯ ಕಟ್ಟಿದುದ ಕಂಡೆ. ಮುಪ್ಪುರದರಸುಗಳು ಸತ್ತು ಅಷ್ಟಪರ್ವತ ಅಳಿವುದ ಕಂಡೆ. ಚಂದ್ರಸೂರ್ಯರೊಂದಾಗಿ ಸಪ್ತಸಮುದ್ರ ಬತ್ತಿದುದ ಕಂಡೆ. ಭೂಮಿ ಆಕಾಶ ಅಳಿದು ಕತ್ತಲೆ ಬೆಳಗಾದುದ ಕಂಡೆ. ಆ ಬೆಳಗಿನೊಳಗೆ ಮೋಟ ಮೂಕಾರ್ತಿಯ ಕೂಟವ ಕಂಡೆ. ಆ ಕೂಟದ ನಡುವೆ ಒಂದು ತಲೆಯಿಲ್ಲದ ಶಿಶು ಹುಟ್ಟಿದುದ ಕಂಡೆ. ಆ ಕೂಸಿನ ಕಂಡು ಇಬ್ಬರು ಹತವಾದುದ ಕಂಡೆ. ಇಬ್ಬರು ಹತವಾದಲ್ಲಿ ಚತುರ್ದಶಭುವನಂಗಳು ಜಲದಲ್ಲಿ ಪ್ರಳಯವಾದುದ ಕಂಡೆ. ಇಂತೀ ವಿಚಿತ್ರವ ಶಿಶು ಕಂಡು ಬಟ್ಟಬಯಲಿನ ಕಲ್ಲು ಮಾಯವಾಯ್ತು, ಆ ಶಿಶುವಡಗಿದಲ್ಲಿ ಅಡಗಿದಾತನೇ ಪ್ರಳಯವಿರಹಿತನು. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.