Index   ವಚನ - 269    Search  
 
ಅಂಗವಿಲ್ಲದ ಪುರುಷನ ಸಂಗವಿಲ್ಲದ ಸ್ತ್ರೀ ಗರ್ಭವಿಲ್ಲದೆ ಬಸುರಾದುದ ಕಂಡೆ. ದಿನ ವಾರ ಮಾಸವಿಲ್ಲದೆ ಬೇನೆತೋರದೆ ಒಂದು ಶಿಶು ಹಡೆದುದ ಕಂಡೆ. ಆ ಶಿಶು ಮಂಡಲಾಧಿಪತಿಯ ಕೊಂದು ಮಂಡಲವೆಲ್ಲ ಸುಡುವುದ ಕಂಡೆ. ಕಂಡವರ ನುಂಗಿ ಸೂಲಗಿತ್ತಿಯ ಕೊಲ್ಲುವದ ಕಂಡೆ. ತಾಯಿಸಂಗವ ಮಾಡಿ ತಂದೆಯಲ್ಲಿ ಸತ್ತು ಕೂಡಲಚನ್ನಸಂಗಯ್ಯನ ಪಾದದಲ್ಲಿ ಅಡಗಿ ಬಯಲಾದುದ ಕಂಡೆ. ಅದು ಅಡಗಿದಲ್ಲಿ ತಾನಡಗಬಲ್ಲರೆ ಪ್ರಳಯವಿರಹಿತ ಪರಶಿವಮೂರ್ತಿ ತಾನೆಂದನಯ್ಯಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.