Index   ವಚನ - 273    Search  
 
ಗುರು ಮುನ್ನವೋ ಶಿಷ್ಯ ಮುನ್ನವೋ ಲಿಂಗ ಮುನ್ನವೋ ಶರಣ ಮುನ್ನವೋ ಜಂಗಮ ಮುನ್ನವೋ ಭಕ್ತ ಮುನ್ನವೋ ಪಾದೋದಕ-ಪ್ರಸಾದ ಮುನ್ನವೋ ವಿಭೂತಿ-ರುದ್ರಾಕ್ಷಿ ಮುನ್ನವೋ ಮಂತ್ರ ಮುನ್ನವೋ ಶಿವಾಚಾರ ಮೊದಲಾಗಿ ಆವುದು ಮುನ್ನವೋ ಎಂದು ತಿಳಿಯಬಲ್ಲರೆ ಗುರುವೆಂಬೆ. ಭೂಮಿ ಮುನ್ನವೋ ಆಕಾಶ ಮುನ್ನವೋ ಅಗ್ನಿ ಮುನ್ನವೋ ವಾಯು ಮುನ್ನವೋ ಚಂದ್ರ ಮುನ್ನವೋ ಸೂರ್ಯ ಮುನ್ನವೋ ಜ್ಯೋತಿ ಮುನ್ನವೋ ಕಾಳಗತ್ತಲೆ ಮುನ್ನವೋ ಸಮುದ್ರ ಮುನ್ನವೋ ಆತ್ಮ ಮೊದಲಾಗಿ ಆವುದು ಮುನ್ನವೋ ಎಂದು ತಿಳಿಯಬಲ್ಲರೆ ಲಿಂಗವೆಂಬೆ. ಹೆಣ್ಣು ಮುನ್ನವೋ ಗಂಡು ಮುನ್ನವೋ, ಗರ್ಭ ಮುನ್ನವೋ ಶಿಶು ಮುನ್ನವೋ ತಾಯಿ ಮುನ್ನವೋ ತಂದೆ ಮುನ್ನವೋ ಜ್ಞಾನ ಮುನ್ನವೋ ಅಜ್ಞಾನ ಮುನ್ನವೋ ಗಂಧ ಮುನ್ನವೋ ಘ್ರಾಣ ಮುನ್ನವೋ ರುಚಿ ಮುನ್ನವೋ ಜಿಹ್ವೆ ಮುನ್ನವೋ ನೋಟ ಮನ್ನವೋ ರೂಪ ಮುನ್ನವೋ ಶ್ರೋತ್ರ ಮುನ್ನವೋ ಶಬ್ದ ಮುನ್ನವೋ ತ್ವಕ್ ಮುನ್ನವೋ, ಮೃದು ಕಠಿಣ ಮೊದಲಾದ ಆವುದು ಮುನ್ನವೋ ಎಂದು ತಿಳಿಯಬಲ್ಲರೆ ಜಂಗಮವೆಂಬೆ. ಅರಿವು ಮುನ್ನವೋ ಮರೆವು ಮುನ್ನವೋ ಆಚಾರ ಮುನ್ನವೋ ಅನಾಚಾರ ಮುನ್ನವೋ ಬ್ರಹ್ಮಾಂಡ ಮುನ್ನವೋ ಪಿಂಡಾಂಡ ಮುನ್ನವೋ ಮನ ಮುನ್ನವೋ ಪ್ರಾಣ ಮುನ್ನವೋ ಧರ್ಮ ಮುನ್ನವೋ ಕರ್ಮ ಮುನ್ನವೋ ಇಂತೀ ಸರ್ವರೊಳಗೆ ತಾ ಮೊದಲಾಗಿ ಆವುದು ಮುನ್ನವೋ ಎಂದು ತಿಳಿಯಬಲ್ಲರೆ ಪಾದೋದಕ ಪ್ರಸಾದಿಗಳೆಂಬೆ; ವಿಭೂತಿ ರುದ್ರಾಕ್ಷಿಧಾರಣ ಮಂತ್ರಮೌನಿಗಳೆಂಬೆ. ಇಂತಪ್ಪ ವಚನದ ತಾತ್ಪರ್ಯ ತಿಳಿಯಬಲ್ಲರೆ ಲಿಂಗಾಂಗಸಮರಸಾನಂದಸುಖವ ತಿಳಿಯಬಲ್ಲ ಶಿವಜ್ಞಾನಸಂಪನ್ನರೆಂಬೆ. ಪರಶಿವಯೋಗಿಗಳೆಂಬೆ, ಷಟ್‍ಸ್ಥಲ ಭಕ್ತರೆಂದನಯ್ಯ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.