ಮಂಗಳಾಂಗಿ ಮಧುರವಾಣಿ ಕೇಳವ್ವಾ,
ನಿನಗೊಂದು ವಿಚಿತ್ರ ಪೇಳ್ವೆ.
ಎಮ್ಮವರು ಎನಗೆ ಹಳೆಯ ಮುದುಕನ ತಂದು
ಮದುವೆಯ ಮಾಡಿದರು ನೋಡವ್ವಾ!
ನಿನ್ನಿನ ಇರುಳ ಆತನ ಸಂಗಸುಖವನೇನು ಪೇಳ್ವರೆ ಅವ್ವಾ.
ಮೂರು ಮನೆಯೊಳಗಣ ಕೋಣೆಯೊಳಗೆ ಮಂಚದ ಮೇಲೆ
ಆರೂ ಇಲ್ಲದೆ ಎಳೆಯಕುಮಾರಿ
ನಾ ಒಬ್ಬಳು ಮಲಗಿರ್ದೆನು ಕೇಳವ್ವಾ.
ಮೆಲ್ಲಮೆಲ್ಲನೆ ಬಂದು ಎನ್ನ ಮುಸುಕು ತೆಗೆಯಲು
ಆ ನಲ್ಲನ ಕಂಡು ಹೆದರಿ ಬೆದರಿ ಎದ್ದುನಿಂತೆನೆ ಅವ್ವಾ.
ನಾ ಬೆದರಿದ ಕಂಡು ಮುದುಕನು ಎಳೆಯಕುಮಾರನಾಗಿ
ಎನ್ನ ಕರವನೆ ಪಿಡಿದನೆ ಅವ್ವಾ.
ಆತನ ಚಲ್ವಿಕೆಯ ಕಂಡು ಮನೆಮಾರು ತೊರೆದು
ಮರುಳಾಗಿರ್ದೆನವ್ವಾ.
ಆ ಪುರುಷನ ಚಲ್ವಿಕೆಯ ನೋಡಿ
ಎನಗೆ ಕಾಮ ತೋರಿತ್ತು ನೋಡವ್ವಾ.
ಆ ಕಾಮದಿಂದ ಉಟ್ಟ ಶಾಲಿ ತೊಟ್ಟ ಕುಪ್ಪಸ ಸಡಲಿ
ಮುಡಿ ಬಿಚ್ಚಿದವು ನೋಡವ್ವಾ.
ತನ್ನ ಬಾಯೊಳಗಿನ ತಾಂಬೂಲವ
ಎನ್ನ ಬಾಯೊಳಗೆ ಇಕ್ಕಿದ ನೋಡವ್ವಾ.
ಹತ್ತೆ ಕರೆದು ಬಿಗಿದಪ್ಪಿ ತರ್ಕೈಸಿ
ಎನ್ನಂಗದ ಎಲುವು ಮುರಿದು
ನುಗ್ಗುನುಸಿಯ ಮಾಡಿದ ನೋಡವ್ವಾ.
ಈ ಸ್ತ್ರೀ ಪುರುಷರ ಸುಖವ
ಪುರುಷನುಳ್ಳ ಸತಿಯರು ಬಲ್ಲರಲ್ಲದೆ
ಪುರುಷರಿಲ್ಲದ ಸ್ತ್ರೀಯರು ತಿಳಿಯರು ನೋಡವ್ವಾ.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ.