Index   ವಚನ - 279    Search  
 
ವನಾಂತರದಲ್ಲಿ ಕೋಗಿಲೆ ಸ್ವರಗೈದಿತೆಂದು ಕುಂಭಿನಿಯ ಮೇಲೆ ಕಾಗಿ ತಾ ಕರೆದಂತೆ, ಅರಸಿ ಮಂಚವನೇರಿದಳೆಂದು ಕಸ ನೀರು ಹೊರುವ ದಾಸಿ ತಾ ಹೊರಸನೇರುವಂತೆ, ಮಹಾರಾಜಕುಮಾರನು ಆನೆಯನೇರಿದನೆಂದು ಮಣ್ಣು ಹೊರುವ ಉಪ್ಪರಿಗನಮಗ ತಾ ಕೋಣ[ನ]ನೇರುವಂತೆ, ಮಹಾವೀರಕುಮಾರ ಮಹಾತೇಜಿಯನೇರಿದನೆಂದು ಮೈಲಿಗೆಯ ತೊಳೆಯುವ ಮಡಿವಾಳನ ಮಗ ತಾ ಮೋಳಿಗೆಯ ಹೇರುವ ಕತ್ತೆಯನೇರುವಂತೆ, ಬಾಲಹನುಮನು ಲಂಕೆಗೆ ಹಾರಿದನೆಂದು ಒಂದು ಮರುಳಕೋತಿ ತಾ ಪರ್ವತವನೇರಿ ಕೆಳಕ್ಕೆ ಬಿದ್ದಂತೆ, ಮಹಾಮಲೆಯೊಳಗೆ ಒಂದು ಮಹಾವ್ಯಾಘ್ರನು ಘುಡುಘುಡಿಸಿ ಲಂಘಿಸಿ ಒಂದು ಪಶುವಿಗೆ ಹಾರಿತೆಂದು ಮಹಾ ಶೀಗರಿಮೆಳೆಯೊಳಗೊಂದು ಮರುಳ ನರಿ ತಾ ಒದರಿ ಹಲ್ಲು ಕಿಸಿದು ಕಣ್ಣು ತೆರೆದೊಂದು ಇಲಿಗೆ ತಾ ಲಂಘಿಸಿ ಹಾರುವಂತೆ. ಇಂತೀ ದೃಷ್ಟಾಂತದಂತೆ ಆದಿ ಆನಾದಿಯಿಂದತ್ತತ್ತಲಾದ ಘನಮಹಾಲಿಂಗದೊಳಗೆ ಜ್ಯೋತಿ ಜ್ಯೋತಿ ಕೂಡಿದಂತೆ, ಬೆರಸದ ಶಿವಶರಣರು ಹಾಡಿದ ವಚನವ ಶಿವಾಂಶಿಕರಾದ ಸಜ್ಜೀವಾತ್ಮರು ಹಾಡಿ ನಿರ್ವಯಲಾದರೆಂದು ತ್ರಿಭುವನ ಮೊದಲಾದ ಚತುರ್ದಶಭುವನದಲ್ಲಿರುವ ದೇವ ದಾನವ ಮಾನವರು ಮೊದಲಾದ ಜೀವಾತ್ಮರು ಇಟ್ಟೆಯ ಹಣ್ಣ ನರಿ ತಾ ತಿಂದು ಪಿಟ್ಟೆಸಿಕ್ಕು ಬಾಯಿತೆರೆದು ಒದರುವಂತೆ ಏಕಲಿಂಗ ನಿಷ್ಠಾಪಾರಿಗಳ ವಚನವ ಮಲತ್ರಯವೆಂಬ ಇಟ್ಟೆಯಹಣ್ಣ ತಿಂದು ಪಿಟ್ಟೆಸಿಕ್ಕು ಬಾಯಿ ತೆರೆದು ಬೇನೆಹಾಯ್ದ ಕುರಿಯಂತೆ ಒದರಿ ಒದರಿ ಸತ್ತು ಭವದತ್ತ ಮುಖವಾಗಿ ಹೋದರಲ್ಲದೆ ಇವರು ಲಿಂಗೈಕ್ಯಗಳಾಗಲರಿಯರು ನೋಡೆಂದನಯ್ಯ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.