Index   ವಚನ - 302    Search  
 
ಅರಣ್ಯದೊಳಗಿರುವಣ್ಣಗಳ ಅಂಗನೆಯರ ಅಂಗಳದಲ್ಲಿರಿಸಿತ್ತು ಮಾಯೆ. ಅರಮನೆಯೊಳಗೆ ಅಂಗನೆಯರ ಸಂಗಸುಖದಲ್ಲಿರುವಣ್ಣಗಳ ಅರಣ್ಯದ ಗುಡ್ಡಗಂಹಾರ ಗುಹ್ಯದಲ್ಲಿರಿಸಿತ್ತು ಮಾಯೆ. ಹೆಣ್ಣುಬಿಟ್ಟೆವೆಂಬಣ್ಣಗಳ ಸ್ತ್ರೀಯರ ಕಣ್ಣ ಮುಂದೆ ಕಾಲಕಟ್ಟಿ ಕೆಡವಿತ್ತು ಮಾಯೆ. ಹೊನ್ನು ಬಿಟ್ಟೆವೆಂಬಣ್ಣಗಳ ಕಳವಳದಿಂದ ಪರದ್ರವ್ಯವ ಅಪಹರಿಸಿತ್ತು ಮಾಯೆ. ಮಣ್ಣಬಿಟ್ಟೆವೆಂಬಣ್ಣಗಳ ಮಠಮಾನ್ಯಕ್ಕೆ ಹೋರಾಡಿಸಿ ದೇಶಭ್ರಷ್ಟನಾಗಿ ತಿರುಗಿಸಿತ್ತು ಮಾಯೆ. ಬುದ್ಧಿವಂತರೆಂಬಣ್ಣಗಳ ಮುದ್ದಿ ನರಕವ ತಿನಿಸಿತ್ತು ಮಾಯೆ. ಸಕಲವಿದ್ಯೆ ಬಲ್ಲೆವೆಂಬಣ್ಣಗಳ ಬಲ್ಲತನ ನೋಡಾ ! ಬಾಲೆಯರ ಬಾಯ ಲೋಳೆಯ ನೆಕ್ಕಿಸಿತ್ತು ಮಾಯೆ. ಸ್ತ್ರೀಯರ ಮುಖ ನೋಡಲಾಗದೆಂದು ಮುಖದಮೇಲೊಂದು ವಸ್ತ್ರವ ಹಾಕಿಕೊಂಡು ತಿರುಗುವಣ್ಣಗಳ ಬಾಲೆಯರ ಬಾಗಿಲ ಮೋರೆಯಲ್ಲಿರಿಸಿತ್ತು ಮಾಯೆ. ಸ್ತ್ರೀಯರ ಕಂಡು ನಾಚಿ ಮಾತಾಡದಣ್ಣಗಳ ನಾಚಿಕೆಯ ಬಿಡಿಸಿ ಮಾತಾಡಿಸಿತ್ತು ಮಾಯೆ. ವಿರಕ್ತರೆಂಬಣ್ಣಗಳ ಬಾಲೆಯರ ಬಾಯಿತೊಂಬಲ ತಿನಿಸಿತ್ತು ಮಾಯೆ. ಪಾದಪೂಜೆಯ ಮಾಡಿ ಪಾದೋದಕ ಪ್ರಸಾದ ಕೊಂಬ ಭಕ್ತಜನಂಗಳ ಪಾದಪೂಜೆಯ ಮಾಡಿಸಿಕೊಂಡು ಪಾದೋದಕ ಪ್ರಸಾದವ ಪಾಲಿಸುವ ಹಿರಿಯರ ಇಂತಪ್ಪ ದೇಶಭಕ್ತರೆಂಬುಭಯರ ಬಾಲೆಯರ ಪಾದಪೂಜೆ ಮಾಡಿಸಿತ್ತು ಮಾಯೆ. ಸರ್ವಾಂಗ ವಿಭೂತಿ ರುದ್ರಾಕ್ಷಿ ಧರಿಸುವಣ್ಣಗಳ ಬಾಲೆಯರ ಮನೆಯಲ್ಲಿ ಒಲಿಯ ಬೂದಿಯ ಬಳಿಸಿತ್ತು ಮಾಯೆ. ಮಂತ್ರವ ನೆನೆವಣ್ಣಗಳ ಬಾಲೆಯರ ನಾಮವ ನೆನಿಸಿ ಅವರ ಬಾಗಿಲ ಮುಂದೆ ಹೆಳವನಂತೆ ಹೊಗಳಿಸಿತ್ತು ಮಾಯೆ. ಕರಸ್ಥಲದಲ್ಲಿ ಲಿಂಗವ ಪಿಡಿವಣ್ಣಗಳ ಬಾಲೆಯ ಕುಚವ ಪಿಡಿಸಿ ಮುಖದ ಮೇಲೆ ಚುಂಬನವ ಕೊಡಿಸಿ ತೊಡೆಯ ಸಂದಿನಲ್ಲಿರಿಸಿತ್ತು ಮಾಯೆ. ಪಂಡಿತರೆಂಬಣ್ಣಗಳ ಬಾಲೆಯರ ಮಲವೊಸರುವ ಪೃಷ್ಠ ಹಿಡಿಸಿತ್ತು ಮಾಯೆ. ಇಂತಪ್ಪ ಮಾಯಾಶಕ್ತಿಯ ಗೆಲುವರೆ ನವಖಂಡಪೃಥ್ವಿಮಧ್ಯದಲ್ಲಿರುವ ದೇವ ದಾನವ ಮಾನವರು ಮೊದಲಾದವರಿಗೂ ಅಳವಲ್ಲ. ಶಿವಜ್ಞಾನಸಂಪನ್ನರಾದ ಶಿವಶರಣರಿಗಲ್ಲದೆ ಇಲ್ಲ ಅಲ್ಲ ಎಂದನಯ್ಯ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.