ಹಾಳುಗೋಟಿನ ಭಿತ್ತಿ ಬೇಲಿಯಲ್ಲಿ
ತಲೆ ಕಣ್ಣು ಕಾಲಿಲ್ಲದ ಮೂರು ಹೆಣವ ಕಚ್ಚಿ,
ಉಡವು ಹರಿದಾಡುವದ ಕಂಡೆ.
ಕಬ್ಬಕ್ಕಿಹಿಂಡಿನಲ್ಲಿ ಕೂಡಿ ಮೇಯುವದ ಕಂಡೆ.
ಆಕಾಶದಲ್ಲಿ ಧೂಮಕೇತು ಮೂಡಲು
ಉಡು ಸತ್ತು, ತಲೆ ಕಾಲು ಕಣ್ಣು ಬಂದು ನೋಡಲು
ಕಬ್ಬಕ್ಕಿಯ ಹಿಂಡು ಕೈಯ ನುಂಗಿತ್ತು,
ಸತ್ತ ಉಡವು ಕೈಯ ನುಂಗಿ,
ಎಲ್ಲಿ ಹೋಯಿತ್ತೆಂಬುದ ತಿಳಿಯಬಲ್ಲರೆ,
ಅಚ್ಚಶರಣ ಕಾಡನೊಳಗಾದ
ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ.