Index   ವಚನ - 315    Search  
 
ಕನ್ಯಾಸ್ತ್ರೀಯಳ ಕುಚವ ಪಿಡಿದು, ಚುಂಬನವ ಮಾಡಿ ಭೋಗಿಸಬಲ್ಲರೆ ಪರಮಾನಂದಜಂಗಮವೆಂಬೆ. ಇಲ್ಲಾದರೆ ವೇಷಧಾರಿ ಜಾತಿಕಾರ ಸೂಳೆಮಕ್ಕಳೆಂಬೆ. ಅಷ್ಟವಿಧಾರ್ಚನೆ ಷೋಡಶೋಪಚಾರಂಗಳ ಕೆಡಿಸಿ ಧೂಪವ ಸುಟ್ಟು, ಪತ್ರಿ ಪುಷ್ಪವ ತಿಂದು, ಜ್ಯೋತಿಯ ನುಂಗಿ, ಸತ್ತ ಕರವ ತಿಂದು, ನೀರು ಕುಡಿಯಬಲ್ಲರೆ ಪರಮಚಿದ್ಘನಲಿಂಗವೆಂಬೆ. ಇಲ್ಲಾದರೆ ತಕ್ಕಡಿಯ ಕಾಣಿಕಲ್ಲು ಕಂಡು ತೂಗುವ ಸೇರುಗಲ್ಲೆಂಬೆ. ಮಾದಿಗರ ಮನೆಯ ಪದ್ಮಜಾತಿನಿಯೆಂಬ ಕನ್ಯೆಕುಮಾರಿಯ ಕಳಸ ಕುಚವ ಪಿಡಿದು ಮುದ್ದುಕೊಟ್ಟು ಕಂಡವ ತಿಂದು ಹೆಂಡವ ಕುಡಿದು ಭೋಗಿಸಿ ಸಂಗಸುಖದೊಳಗಿರಬಲ್ಲರೆ ಪರಮಸದ್ರೂಪವಾದಾಚಾರ್ಯನೆಂಬೆ. ಇಲ್ಲವಾದರೆ ಮೂಕಾರ್ತಿಮೂಳೆಯ ಮಕ್ಕಳೆಂಬೆ. ಹದ್ದು ಗೂಗಿ ಕಪ್ಪಿ ಇರಿವಿ ಮೊದಲಾದ ಈ ನಾಲ್ಕು ತಿಂದು ಈಚಲಸೆರೆಯ ಕುಡಿದು, ಮದವೇರಿದ ಮದಗಜದ ಹಾಗಿರಬಲ್ಲರೆ, ಪಾದೋದಕ ಪ್ರಸಾದಿಗಳೆಂಬೆ. ಇಲ್ಲಾದರೆ ಕುಟಿಲ ಕುಹಕ ವೇಷಧಾರಿ ಡೊಂಬತಿಯ ಮಕ್ಕಳೆಂಬೆ. ಇಂತೀ ಪಂಚಬ್ರಹ್ಮತತ್ವದ ಭೇದವ ಬಸವಣ್ಣ, ಚನ್ನಬಸವಣ್ಣ, ಪ್ರಭುದೇವರಾಂತ್ಯಮಾದ ಏಳನೂರೆಪ್ಪತ್ತು ಪ್ರಮಥಗಣಂಗಳು ಬಲ್ಲರು. ಮತ್ತಂ, ಅಂತಪ್ಪ ಪ್ರಮಥಗಣಂಗಳ ಪ್ರಸಾದದಿಂದುದ್ಭವಿಸಿದ ಚಿದಾತ್ಮರುಗಳಾದ ಜ್ಞಾನಕಲಾತ್ಮರು ಬಲ್ಲರಲ್ಲದೆ, ಮಿಕ್ಕಿನ ಜಡಮತಿ ವೇಷಧಾರಿಗಳಾದ ಕುರಿಮನುಜರೆತ್ತ ಬಲ್ಲರೆಂದನಯ್ಯ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.