Index   ವಚನ - 3    Search  
 
ಸೂಳೆಯ ತನುಮನದ ಕೊನೆಯಲ್ಲಿ ವಿಟಗಾರನೇ ಪ್ರಾಣಲಿಂಗ; ಶೀಲವಂತನ ತನುಮನದ ಕೊನೆಯಲ್ಲಿ ಭವಿಯೇ ಪ್ರಾಣಲಿಂಗ; ನಿತ್ಯ ಪ್ರಸಾದಿಯ ತನುಮನದ ಕೊನೆಯಲ್ಲಿ ಬೆಕ್ಕೇ ಪ್ರಾಣಲಿಂಗ; ಬ್ರಾಹ್ಮಣರ ತನುಮನದ ಕೊನೆಯಲ್ಲಿ ಸೂತಕವೇ ಪ್ರಾಣಲಿಂಗ; ಇಂಥವರಿಗೆಲ್ಲಾ ಇಂತಾಯಿತು! ದೇವರಗುಡಿಯೆಂದು ದೇಗುಲವ ಪೊಕ್ಕು ನಮಸ್ಕಾರವ ಮಾಡುವಂಗೆ ಹೊರಗೆ ಕಳೆದ ಪಾದರಕ್ಷೆಯೆ ಪ್ರಾಣಲಿಂಗ. ಅದು ಎಂತೆಂದಡೆ: ಸೂಳೆಗೆ ವಿಟನ ಹಂಬಲು; ಶೀಲವಂತನಿಗೆ ಭವಿಯ ಹಂಬಲು; ನಿತ್ಯಪ್ರಸಾದಿಗೆ ಬೆಕ್ಕಿನ ಹಂಬಲು; ಬ್ರಾಹ್ಮಣನಿಗೆ ಸೂತಕದ ಹಂಬಲು; ಇವರು ಭಕ್ತಿಶೂನ್ಯರು ಕಾಣಿರಯ್ಯಾ! ಇವಂ ಬಿಟ್ಟು, ಪರಸ್ತ್ರೀಯರ ಮುಟ್ಟದಿರ್ಪುದೇ ಶೀಲ; ಪರದ್ರವ್ಯ[ವ]ಅಪಹರಿಸದಿರುವುದೇ ಆಚಾರ; ಪರನಿಂದೆ[ಯ] ಕರ್ಣದಿಂ ಕೇಳದಿರ್ಪುದೇ ನಿತ್ಯಪ್ರಸಾದತ್ವ; ಪರರಂ ದೂಷಿಸದಿರ್ಪುದೇ ಬ್ರಹ್ಮತ್ವ. ಇಂತಿದರಲ್ಲಿ ನಡೆದು, ದೇವರಿಗೆ ನಮಸ್ಕಾರವ ಮಾಡುವುದೇ ನಮಸ್ಕಾರ. ಹಿಂದಿನ ಪುರಾತನರು ನಡೆದರೆಂಬೋ ಶಾಸ್ತ್ರವಂ ಕೇಳಿ, ಈಗಿನ ಕಿರಾತರು 'ನಾವು ಶೀಲವಂತರು' 'ನಾವು ಆಚಾರವಂತರು', 'ನಾವು ನಿತ್ಯಪ್ರಸಾದಿಗಳು', 'ನಾವು [ 'ಪೂಜಸ್ಥರು'], 'ನಾವು ಬ್ರಾಹ್ಮಣರು', ಎಂದು ತಿರುಗುವ ಮೂಳ ಹೊಲೆಯರ ಮುಖವ ನೋಡಲಾಗದು ಕಾಣೋ ಕೂಡಲಾದಿ ಚನ್ನಸಂಗಮದೇವಾ