Index   ವಚನ - 14    Search  
 
ಎಲಾ, ಓದಿದವರಿಗೆ ಮೋಕ್ಷವಿಲ್ಲಾ! ಅದು ಎಂತೆಂದಡೆ, ಒಂದು ಶಾಸ್ತ್ರವನೋದಿ ಮನಸು ನಿಲುಕಡೆಯಿಲ್ಲದೆ ಮತ್ತೊಂದು ನೋಡುವೆ. ಮತ್ತೊಂದು ಮತ್ತೊಂದು [ಎಂದು] ನೋಡುವರೆ ದಿವಸ ಸಮೀಪಿಸಿತ್ತು. ಸಮೀಪಿಸಿದ ಬಳಿಕ ಯಮದೂತರು ಬಂದು ವಿಪ್ಲವ[ವ] ಮಾಡುವರು. ಏನು ಕಾರಣವೆಂದಡೆ, ಓದಿದವರಿಗೆ ಮೋಕ್ಷವಿಲ್ಲಾ! ಅದು ಎಂತೆಂದಡೆ, ಬಿಳಿಯ ವಸ್ತ್ರವ ಹೊದ್ದುಕೊಂಡ ತಿರುಕಗೆ ಎಲ್ಲರ ಮನ್ನಣೆಯುಂಟು. ಮಾಸಿದರೆ ಅದಕೆ ಶುದ್ಧ ಮಾಡುವನು ರಜಕ. ಇದರಂತೆ, ಓದಿನ [ಮರ್ಮವು] ತಿಳಿಯಲಿಲ್ಲ. ಇದಂ ಬಿಟ್ಟು, ಬಿಳಿಯ ವಸ್ತ್ರವು ಹೊಡೆಸಿಕೊಂಡು ಹೊಡೆಸಿಕೊಂಡು ಮುಪ್ಪಾದ ಬಳಿಕ ಕೂಸುಗಳ ಗುದಕ್ಕೆ ಒರಸಿ ಬಿಸುಡುವರಲ್ಲದೆ, ಅದಕ್ಕೆ ಅಧಿಕವುಂಟೇ ? ಇದರಂತೆ ಓದಿನ [ಮರ್ಮವು] ತಿಳಿಯಲಿಲ್ಲ. ಇದಂ ಬಿಟ್ಟು, ಮೂಢಭಾವದಿಂದ ಶಿವಲಿಂಗವ ಪೂಜಿಸಿದವರು ಮೋಕ್ಷಕರಲ್ಲದೆ ಮಿಕ್ಕವರಿಗುಂಟೇನಲ್ಲ. ಅದೇನು ಕಾರಣವೆಂದಡೆ, ಮೂಢ ಭಕ್ತನೇ ಕಂಬಳಿಯೆಂದು ತಿಳಿಯೆಲಾ! ಕಂಬಳಿಗೆ ಮನ್ನಣೆಯುಂಟೆ? ಹಾಸಿದರೆ ಮಾಸುವುದೆ? ಹೊದ್ದರೆ ಚಳಿಯ ತೋರುವುದೆ? ರಜಕನ ಮನೆಯ ಕಂಡುಬಲ್ಲುದೆ ? ಮುಪ್ಪಾದ ಕಾಲಕ್ಕೆ ಕೃಮಿಶಳೆಗಶ್ವರ(?) ದೇವರಿಗೆ ಜೇಷ್ಮು(?) ಎಲ್ಲಾ ಬರವಾಗಿ ಭಕ್ತ ಪೋಷಿಸುವದಲ್ಲದೆ ಕೊರತೆಯುಂಟೆ? ಇದರಂತೆ ಮೂಢಭಕ್ತಂಗೆ ಮೋಕ್ಷವೆಂದು ತಿಳಿ. ಇದಂ ಬಿಟ್ಟು, ಮಾತು ಕಲಿತ ಭೂತಗಳಂತೆ, ಬರಿದೆ ಶಾಸ್ತ್ರವನೋದಿ, ಕಂಡಕಂಡವರಲ್ಲಿ ಬಗುಳಿ, ಕಾಲಕ್ಷೇಪವ ಕಳೆವ ಮೂಳ ಹೊಲೆಯರ ಮುಖವ ನೋಡಲಾಗದು ಕಾಣಾ ಕೂಡಲಾದಿ ಚನ್ನಸಂಗಮದೇವಾ