Index   ವಚನ - 9    Search  
 
ಶಿವನೆ, ನೀನು ಗುರುವಾದೆ ಲಿಂಗವಾದೆ ಜಂಗಮವಾದೆ ಭಕ್ತನಾದೆ. ಗುರುವಾಗಿದ್ದು ಭಕ್ತನೊಳಡಗಿದೆ. ಅದೇನು ಕಾರಣವೆಂದಡೆ: ಗುರುವಿಂಗೆ ಅರ್ಥಪ್ರಾಣಾಭಿಮಾನವನು ಕೊಟ್ಟು, ಆತ ಭೋಗಿಸಿದ ಬಳಿಕ ತಾನಾ ಪ್ರಸಾದ ಮುಂತಾಗಿ ಭೋಗಿಸುವನಾಗಿ, ಆ ಗುರುವು ತನ್ನೊಳಡಗಿದ. ಲಿಂಗವಾಗಿದ್ದು ಭಕ್ತನೊಳಡಗಿದೆ. ಅದೇನು ಕಾರಣವೆಂದಡೆ: ಲಿಂಗಕ್ಕೆ ಅರ್ಥಪ್ರಾಣಾಭಿಮಾನವನು ಕೊಟ್ಟು, ಆತ ಭೋಗಿಸಿದ ಬಳಿಕ ತಾನಾ ಪ್ರಸಾದ ಮುಂತಾಗಿ ಭೋಗಿಸುವನಾಗಿ, ಆ ಲಿಂಗವು ಭಕ್ತನೊಳಡಗಿದ. ಜಂಗಮವಾಗಿದ್ದು ಭಕ್ತನೊಳಡಗಿದೆ. ಅದೇನು ಕಾರಣವೆಂದಡೆ ಜಂಗಮಕ್ಕೆ ಅರ್ಥಪ್ರಾಣಾಭಿಮಾನವನು ಕೊಟ್ಟು, ಆ ಜಂಗಮವು ಭೋಗಿಸಿದ ಬಳಿಕ ತಾನಾ ಪ್ರಸಾದ ಮುಂತಾಗಿ ಭೋಗಿಸುವನಾಗಿ, ಆ ಜಂಗಮವು ಭಕ್ತನೊಳಡಗಿದ. ಇಂತಡಗುವರೆ ಹಿರಿಯರು? ಇಂತಡಗುವರೆ ಗುರುವರು? ಇಂತಡಗುವರೆ ಮಹಿಮರು? ಇವರಿಗೆ ಭಾಜನವೊಂದೆ ಭೋಜನವೊಂದೆ. ಈ ನಾಲ್ಕು ಒಂದಾದ ಘನಕ್ಕೆ ಪರಿಯಾಣ ಬೇರೆಂಬ ಶಾಸ್ತ್ರದ ಸೂತಕಿಗಳನೆನಗೆ ತೋರದಿರಯ್ಯಾ, ಮಸಣಯ್ಯಪ್ರಿಯ ಗಜೇಶ್ವರಾ.