Index   ವಚನ - 3    Search  
 
ಆಣವಮಲ ಮಾಯಾಮಲ ಕಾರ್ಮಿಕಮಲವೆಂಬ ಮಲತ್ರಯಂಗಳ ಕಳದು ಎನ್ನ ಅಂತರಂಗ ಬಹಿರಂಗ ಶುದ್ಧಾತ್ಮನ ಮಾಡಿದ ಮಡಿವಾಳಯ್ಯ. [ಎನ್ನ] ಸಾಕಾರ ಮೂರು ಮೂರು ಹದಿನೆಂಟು ಪ್ರಕಾರವನೊಳಕೊಂಡು, ಎನ್ನ ಬಹಿರಂಗದಲ್ಲಿ ಆಯತವಾದನಯ್ಯ ಬಸವಣ್ಣ. ಎನ್ನ ಅಂತರಂಗದಲ್ಲಿ ಸ್ವಾಯತವಾದನಯ್ಯ ಚೆನ್ನಬಸವಣ್ಣ. ನಿರಾಳ ನಿರ್ಮಾಯ ನಿಶ್ಯೂನ್ಯ ಬ್ರಹ್ಮವೆ ಉಭಯಸಂಗದಲ್ಲಿ ಸನ್ನಿಹಿತವಾದನಯ್ಯ ಪ್ರಭುದೇವರು. ಇಂತೀ ಅಂತರಂಗ ಬಹಿರಂಗ ಆತ್ಮಸಂಗವನರುಹಿ ಬೋಳಬಸವೇಶ್ವರನು ಸಿದ್ಧೇಶ್ವರನ ನಿಜಪದವನೊರೆದೊರೆದು ತೋರಿದ ಕಾರಣ ಎನ್ನ ತನು ಬಯಲಾಯಿತ್ತು, ಎನ್ನ ಮನ ಬಯಲಾಯಿತ್ತು, ಪ್ರಾಣ ಬಯಲಾಯಿತ್ತು, ಇಂದ್ರಿಯ ಬಯಲಾಯಿತ್ತು, ವಿಷಯ ಬಯಲಾಯಿತ್ತು, ಇಂತಿವರೊಳಗೆ ನಾನು ಬಯಲಾದೆನು. ಪರಂಜ್ಯೋತಿ ಮಹಾಲಿಂಗಗುರು ಸಿದ್ಧಲಿಂಗ ಪ್ರಭುವಿನಲ್ಲಿ ಹಿಂದು ಮುಂದು ಎಡ ಬಲ ಅಡಿ ಆಕಾಶವೆಂಬ ಭೇದವನರಿಯದೆ ಮುಳುಗಿ `ನಿಶ್ಯಬ್ದ ಬ್ರಹ್ಮಮುಚ್ಯತೆ' ಎಂಬ ನುಡಿಯಡಗಿತ್ತಯ್ಯ, ನಿಮ್ಮ ಧರ್ಮ ನಿಮ್ಮ ಧರ್ಮ.