Index   ವಚನ - 7    Search  
 
ಪ್ರಥಮದಲ್ಲಿ ವಾಙ್ಮನಕ್ಕೆ ಬಾರದ ಸಚ್ಚಿದಾನಂದ ನಿತ್ಯಪರಿಪೂರ್ಣ ಲಕ್ಷಣವನುಳ್ಳ ನಿಃಕಲದೇವರು. ದ್ವಿತೀಯದಲ್ಲಿ `ಪರಂ ಗೂಢಂ ಶರೀರಸ್ಥಂ ಲಿಂಗಕ್ಷೇತ್ರಮನಾದಿವತ್' ಎಂಬ ಪಂಚಸಂಜ್ಞೆಯನ್ನುಳ್ಳ ಮಹಾಲಿಂಗದೇವರು. ತೃತೀಯದಲ್ಲಿ ಕರ್ಮಕರ್ತೃ ಮೂರ್ತಿ ಅಮೂರ್ತಿ ಶಿವಸಾದಾಖ್ಯವನುಳ್ಳ ಸದಾಶಿವದೇವರು. ಚತುರ್ಥದಲ್ಲಿ ಭವ ಶರ್ವ ರುದ್ರ ಭೀಮ ಸದಾಶಿವ ಉಗ್ರ ಸೋಮ ಪಶುಪತಿ ಎಂಬ ಎಂಟು ಪ್ರಕಾರವನುಳ್ಳ ಈಶ್ವರದೇವರು. ಪಂಚಮದಲ್ಲಿ ಶರ್ವ ಶಿವ ಮಹಾದೇವರು ನೀಲಕಂಠ ವೃಷಭದ್ವಜ ಈಶಾನ ಶಂಕರ ಭೀಮ ಪಿನಾಕಿ ಚಂದ್ರಶೇಖರ ಕಪರ್ದಿ ವಿರೂಪಾಕ್ಷ ವಾಮದೇವ ಮೃಡ ಭೂತೇಶ ಶೂಲಿ ಸರ್ವಜ್ಞ ಸ್ಥಾಣು ಪಾರ್ವತಿಪ್ರಿಯ ಮಹಾಂಕಾಳ ಮಹಾದೀರ್ಘ ಮಹಾತಾಂಡವ ಗಂಗಾಧರ ಗಣೇಶ್ವರ ಗಜಧ್ವಂಸಿ ಎಂಬ ಇಪ್ಪತ್ತೈದು ಪ್ರಕಾರವನುಳ್ಳ ಮಾಹೇಶ್ವರದೇವರು. ಷಷ್ಠಮದಲ್ಲಿ ಶಿವ ಮಾಹೇಶ್ವರ ರುದ್ರ ಶ್ರೀಕಂಠ ಶಂಭು ಈಶ್ವರ ಮಹಾದೇವರು ಪಶುಪತಿ ನೀಲಕಂಠ ವೃಷಭಧ್ವಜ ಪರಮೇಶ್ವರನೆಂಬ ಹನ್ನೊಂದು ಪ್ರಕಾರವನುಳ್ಳ ರುದ್ರದೇವರು. ಸಪ್ತಮದಲ್ಲಿ ಭವ ಮೃಡ ಹರನೆಂಬ ಮೂರು ಪ್ರಕಾರವನುಳ್ಳ ತ್ರಯಾವಯದೇವರು. ಅಷ್ಟಮದಲ್ಲಿ ಭಯಂಕರವನುಳ್ಳ ವಿರಾಟಮೂರ್ತಿದೇವರು. ನವಮದಲ್ಲಿ ಸರ್ವಚೈತನ್ಯಾತ್ಮಕವನುಳ್ಳ ಹಿರಣ್ಯದೇವರು. ದಶಮದಲ್ಲಿ ಸುಷುಪ್ತಾವಸ್ಥೆಯನುಳ್ಳ ಪ್ರಾಜ್ಞದೇವರು. ಏಕಾದಶದಲ್ಲಿ ಸ್ವಪ್ನಾವಸ್ಥೆಯನುಳ್ಳ ತೈಜಸದೇವರು. ದ್ವಾದಶದಲ್ಲಿ ಜಾಗ್ರಾವಸ್ಥೆಯನುಳ್ಳ ವಿಶ್ವೇಶ್ವರದೇವರು. ಇಂತೀ ನಾಮ ಪರಿಯಾಯಂಗಳನೆಲ್ಲವನು ಬಸವೇಶ್ವರನೆ ಅಲಂಕರಿಸಿ `ಏಕಮೂರ್ತಿಸ್ತ್ರಯೋರ್ಭಾಗಂ' ಎಂಬ ಶ್ರುತಿ ಪ್ರಮಾಣದಿಂದ ಎನ್ನ ಸಾಕಾರ ಮೂರು ಮೂರು ನವವಿಂಶತಿ ನವವಿಂಶತಿ ಸ್ವರೂಪವನೊಳಕೊಂಡು ಎನ್ನ ಬಹಿರಂಗದಲ್ಲಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ನಿರಾಕಾರ ಮೂರು ಮೂರು ವಿಂಶತಿ ವಿಂಶತಿ ಸ್ವರೂಪವನೊಳಕೊಂಡು ಎನ್ನ ಅಂತರಂಗದಲ್ಲಿ ಮೂರ್ತಿಗೊಂಡನಯ್ಯ ಚೆನ್ನಬಸವಣ್ಣ. ನಾಮ ರೂಪು ಕ್ರೀ ಏನೂ ಏನೂ ಇಲ್ಲದ ಸಚ್ಚಿದಾನಂದ ಲಕ್ಷಣವನುಳ್ಳ ಬ್ರಹ್ಮವೇ ಉಭಯಸಂಗದಲ್ಲಿ ಸನ್ನಿಹಿತವಾದನಯ್ಯ ಪ್ರಭುದೇವರು. ಇಂತೀ ಪಿಂಡಾದಿ ಜ್ಞಾನಶೂನ್ಯಾಂತ ಸ್ಥಲ ಕುಳ ಭೇದವನು ಸಿದ್ಧೇಶ್ವರನೆನಗೆ ಅರುಹಿ ತನ್ನ ನಿಜಪದದೊಳಗೆ ಇಂಬಿಟ್ಟುಕೊಂಡ ಕಾರಣ ಪರಂಜ್ಯೋತಿ ಮಹಾಲಿಂಗಗುರು ಸಿದ್ಧಲಿಂಗ ಪ್ರಭುವಿನಲ್ಲಿ ಸಿದ್ಧೇಶ್ವರನ ಘನವು ಎನಗೆ ವಾರಿಕಲ್ಲ ಪುತ್ಥಳಿಯನಪ್ಪಿಕೊಂಡಂತಾಯಿತ್ತಯ್ಯ ಬೋಳಬಸವೇಶ್ವರ ನಿಮ್ಮ ಧರ್ಮ ನಿಮ್ಮ ಧರ್ಮ.