Index   ವಚನ - 20    Search  
 
ಶ್ರೀಗುರುಲಿಂಗಜಂಗಮದ ಚರಣ ಸೋಂಕಿನಿಂ ಪವಿತ್ರವಾದ ಚಿದ್ಭಸಿತವ ಧರಿಸಿದವರಿಗೆ ಬಹುಜನ್ಮ ಪಾಪದೋಷವ ತೊಡವುದಯ್ಯ. ಶ್ರೀ ವಿಭೂತಿಯ ಧರಿಸಿದವರಿಗೆ ಅಜ್ಞಾನದ ಪಾಶವ ಹರಿವುದಯ್ಯ. ಶ್ರೀ ವಿಭೂತಿಯ ಧರಿಸಿದವರಿಗೆ ಸಮಸ್ತ ಜನವಶ್ಯ ರಾಜವಶ್ಯವ ಕೊಡುವುದಯ್ಯ. ಶ್ರೀ ವಿಭೂತಿಯ ಧರಿಸಿದವರಿಗೆ ಸದಾಚಾರ ಸದ್ಭಕ್ತಿಸಾರದುನ್ನತಿಯ ಬೆಳಗ ತೋರುವುದಯ್ಯ. ಶ್ರೀ ವಿಭೂತಿಯ ಧರಿಸಿದವರಿಗೆ ಜನನ-ಮರಣದ ಭಯವ ತೊಡವುದಯ್ಯ. ಶಿವನಿಂದ ಅಗಸ್ತ್ಯ, ಕಸ್ಯಪ, ಜಮದಗ್ನಿ, ಗೌತಮ, ವಶಿಷ್ಠ ಮೊದಲಾದ ಋಷಿ ಸಮೂಹಗಳೆಲ್ಲ ಶ್ರೀ ವಿಭೂತಿಯ ಪಡೆದು ಧರಿಸಿ, ಸದ್ಭಕ್ತಿಪಥವ ಸೇರಿದರಯ್ಯ. ನಮ್ಮ ಶರಣಗಣಂಗಳು ಆ ಶಿವನ ಚಿತ್ಕಾಂತಿಯ ಬಹಿಷ್ಕರಿಸಿ, ಶ್ರೀಗುರುಲಿಂಗಜಂಗಮದ ಚಿದ್ಬೆಳಗನೆ ಹೆಪ್ಪಹಾಕಿ, ಚಿದಾಂಡವೆಂಬ ಘಟ್ಟಿಯ ಮಾಡಿ, ನಿಷ್ಕಲ ನಿಶ್ಶೂನ್ಯಮೂರ್ತಿಯ ಚರಣಜಲವ ವೇಧಿಸಿ, ಮಹಾಮಂತ್ರವ ಸ್ಥಾಪಿಸಿ, ಶ್ರೀಗುರುಲಿಂಗಜಂಗಮದ ಸ್ಪರ್ಶದಿಂದ ತತ್ವಸ್ಥಾನಂಗಳಲ್ಲಿ ಶಿವಲೋಕದ ಶಿವಗಣಂಗಳು, ರುದ್ರಲೋಕದ ರುದ್ರಗಣಂಗಳು, ನಾಗಲೋಕದ ನಾಗಗಣಂಗಳು, ದೇವಲೋಕದ ದೇವಗಣಂಗಳು, ಶಾಂಭವಲೋಕದ ಶಾಂಭವಗಣಂಗಳು, ಮರ್ತ್ಯಲೋಕದ ಮಹಾಗಣಂಗಳೆಲ್ಲ ಧರಿಸಿ ಜ್ಯೋತಿರ್ಮಯವಾದರು ನೋಡ. ಶ್ರೀಗುರುಲಿಂಗಜಂಗಮದ ಚಿತ್ಪ್ರಭಾಭೂತಿಯೆ ಸರ್ವಾಚಾರಸಂಪದಕ್ಕೆ ಮೋಕ್ಷದ ಕಣಿ ನೋಡ ಸಂಗನಬಸವೇಶ್ವರ.