Index   ವಚನ - 27    Search  
 
ಶ್ರೀ ಮಹಾಮಂತ್ರವ ಜಪಿಸಿದಾತಂಗೆ ಕಾಯದ ಕಾಮವಿಕಾರವಳಿದು ಲಿಂಗಕಾಯವೆನಿಸುವುದಯ್ಯ. ಶ್ರೀ ಮಹಾಮಂತ್ರವ ಜಪಿಸಿದಾತಂಗೆ ಮನದ ಮರವೆಯಳಿದು ಲಿಂಗಮನವಾಗುವುದಯ್ಯ. ಶ್ರೀ ಮಹಾಮಂತ್ರವ ಜಪಿಸಿದಾತಂಗೆ ಪ್ರಾಣನ ಪ್ರಪಂಚಳಿದು ಲಿಂಗಪ್ರಾಣವೆಂದೆನಿಸುವುದಯ್ಯ. ಶ್ರೀ ಮಹಾಮಂತ್ರವ ಜಪಿಸಿದಾತಂಗೆ ಭಾವದ ಭ್ರಮೆಯಳಿದು ಲಿಂಗಭಾವವೆಂದೆನಿಸುವುದಯ್ಯ. ಶ್ರಿ ಮಹಾಮಂತ್ರವ ಜಪಿಸಿದಾತಂಗೆ ಕಾಲ-ಕಾಮ-ಮಾಯಾ-ಮರವೆಗಳೆಲ್ಲ ದಗ್ಧವಾಗಿ ಹೋಗುವುದಯ್ಯ. ಶ್ರೀ ಮಹಾಮಂತ್ರವ ಜಪಿಸಿದಾತಂಗೆ ಸತ್ವ ರಜ ತಮೋಗುಣವಳಿದು ಸಗುಣ ನಿರ್ಗುಣ ನಿಜಗುಣ ಶಿವಯೋಗ ದೊರವುದಯ್ಯ. ಆ ಮಹಾಮಂತ್ರವ ತೆರಹಿಲ್ಲದೆ ಜಪಿಸಿದ ಭಕ್ತಗಣಂಗಳೆಲ್ಲ ಚಿನ್ನಾದ-ಪರನಾದ-ಮಹಾನಾದಂಗಳ ಮೀರಿ ತೋರುವ ನಿಷ್ಕಲ-ನಿಶ್ಯಬ್ದ-ನಿಷ್ಪ್ರಪಂಚ-ನಿರಾಲಂಬ ಇಷ್ಟ ಮಹಾಚಿದ್ಘನಲಿಂಗದಲ್ಲಿ ಕ್ಷೀರ ಕ್ಷೀರ ಬೆರದಂತೆ ಅವಿರಳಾನಂದದಿಂದ ಬೆರದು ಮಹಾ ಬಯಲಪ್ಪುದು ತಪ್ಪದು ನೋಡ. ಸರ್ವಾಚಾರ ಸಂಪದಕ್ಕೆ ಶ್ರೀ ಮಹಾಮಂತ್ರವೆ ಪರಮಾಮೃತಸುಧೆ ನೋಡ, ಸಂಗನಬಸವೇಶ್ವರ