Index   ವಚನ - 33    Search  
 
ದೀಕ್ಷಾತ್ರಯಂಗಳಲ್ಲಿ ನಿಜಗುರುವ ಸಂಬಂಧವ ಮಾಡಿಕೊಂಡು, ಪೂಜಾತ್ರಯಂಗಳಲ್ಲಿ ನಿಜಲಿಂಗವ ಸಂಬಂಧವ ಮಾಡಿಕೊಂಡು, ಭೋಗತ್ರಯಂಗಳಲ್ಲಿ ನಿಜಜಂಗಮವ ಸಂಬಂಧವ ಮಾಡಿಕೊಂಡು, ಕ್ರಿಯಾತ್ರಯಂಗಳಲ್ಲಿ ನಿಜಪಾದೋದಕವ ಸಂಬಂಧವ ಮಾಡಿಕೊಂಡು, ಜ್ಞಾನತ್ರಯಂಗಳಲ್ಲಿ ನಿಜಪ್ರಸಾದವ ಸಂಬಂಧವ ಮಾಡಿಕೊಂಡು, ಆಚಾರತ್ರಯಂಗಳಲ್ಲಿ ನಿಜಚಿದ್ಭಸಿತವ ಸಂಬಂಧವ ಮಾಡಿಕೊಂಡು, ಸರ್ವಾಂಗದಲ್ಲಿ ನಿಜರುದ್ರಾಕ್ಷಿಗಳ ಸಂಬಂಧವ ಮಾಡಿಕೊಂಡು, ಪಂಚಾಕ್ಷರ ಷಡಕ್ಷರಂಗಳೆ ನಡೆನುಡಿಯಾಗಿ, ಸಕಲ ಶಾಸ್ತ್ರಾಗಮ ಪುರಾಣಂಗಳೆ ಹಸ್ತಪಾದಂಗಳಾಗಿ, ಎರಡೆಂಬತ್ತೆಂಟು ಕೋಟಿ ವಚನಂಗಳೆ ಮಹಾಮಂತ್ರಂಗಳಾಗಿ ಸಂಬಂಧವ ಮಾಡಿಕೊಂಡರು ನೋಡ. ಪರಹಿತಾರ್ಥಕ್ಕೋಸ್ಕರವಾಗಿ ಸ್ಥೂಲಕಂಥೆಯ ಧರಿಸಿ ನಿರ್ವಂಚಕಲೀಲಾಮೂರ್ತಿಗಳಾಗಿ, ಇಂತೀ ಏಕಲಿಂಗನಿಷ್ಠಾಪರತ್ವದಿಂದ ಅರಿದಾಚರಿಸುವರೆ ನೂತನ ಸದ್ಭಕ್ತ ಶಿವಶರಣಗಣಂಗಳು ನೋಡ ಸಂಗನಬಸವೇಶ್ವರ.