Index   ವಚನ - 35    Search  
 
ಅಯ್ಯ, ನಿಷ್ಕಲ ಪರಶಿವತತ್ವ ಮಹಾಘನಚಿದಾವರಣಸ್ವರೂಪ ಮಹಾಘನಪರಶಿವಲಿಂಗವ ಸದ್ಗುರುಮುಖದಿಂ ತಮ್ಮ ಭಾವ-ಮನ-ಹೃದಯ-ಶ್ರೋತ್ರ-ತ್ವಕ್ಕು-ನೇತ್ರ- ಜಿಹ್ವೆ-ಘ್ರಾಣ-ಕರಕಂಜಮಧ್ಯದಲ್ಲಿರಿಸಿ ಪರಿಪರಿಯಿಂದರ್ಚಿಸಿ, ನಿರ್ವಂಚಕತ್ವದಿಂದ ಅರ್ಥ ಪ್ರಾಣಾಭಿಮಾನಂಗಳಂ ಸಮರ್ಪಿಸಿ, ಸರ್ವಾಚಾರಸಂಪತ್ತಿನಾಚರಣೆಯಲ್ಲಿ ದೃಢಚಿತ್ತದಿಂದ ನಿಂದ ಮಹಾ ಸದ್ಭಕ್ತ ಶಿವಶರಣನಿರ್ದ ಲೋಕವೆ ರುದ್ರಲೋಕ, ಶಿವಲೋಕ, ದೇವಲೋಕ, ನಾಗಲೋಕ, ಶಾಂಭವಲೋಕವಯ್ಯ. ಆತನ ಭಕ್ತಿಪ್ರಿಯರೆ ರುದ್ರಗಣಂಗಳು, ಶಿವಗಣಂಗಳು, ದೇವಗಣಂಗಳು, ನಾಗಗಣಂಗಳು, ಶಾಂಭವಗಣಂಗಳು ನೋಡ. ಆತನಿರ್ದ ಊರೇ ಶಾಂಭವಪುರ, ಉಳುವೆ, ಮಹಾಕಲ್ಯಾಣವಯ್ಯ. ಆತನ ಗೃಹವೆ ಶಿವಮಂದಿರ-ಶಿವಾಲಯ-ಶಿವಕ್ಷೇತ್ರವಯ್ಯ. ಆತನ ನಡೆ-ನುಡಿ-ಸತ್ಕ್ರಿಯಾಚಾರದಲ್ಲೊಡವೆರದ ಸತ್ಕ್ರಿಯಾಶಕ್ತಿಯೆ ನಾಗಕನ್ನೆ, ದೇವಕನ್ನೆ, ರುದ್ರಕನ್ನೆಯಯ್ಯ. ಆತನ ಅರ್ಚನಾರ್ಪಣಸ್ಥಲವೆ ಮಹಾಘನಶೂನ್ಯ ಸಿಂಹಾಸನ ನೋಡ. ಆತನಾಚರಣೆ ಸೋಂಕಿನಿಂದಡಿಯಿಟ್ಟ ಜಲವೆ ದೇವಗಂಗಾ, ಶಿವಗಂಗಾ, ಪರಮಗಂಗಾ, ನಿಜಪಾವನಗಂಗಾ, ಪರಿಪೂರ್ಣಗಂಗಾಸ್ವರೂಪಾದ ಮಹಾಗಂಗಾತೀರ್ಥ ನೋಡ. ಆತನು ದಯವಿಟ್ಟು ಪರುಷದೃಷ್ಟಿಯಿಂದ ನೋಡಿದ್ದು, ತಟ್ಟು ಮುಟ್ಟು ಸೋಂಕುಗಳೆಲ್ಲ ನಿಜಮೋಕ್ಷ ಸ್ವರೂಪ ನೋಡ. ಸದ್ಭಕ್ತ ಶಿವಶರಣನ ಅಂಗಳವೆ ನನಗೂ ನಿನಗೂ ನಿಜಮೋಕ್ಷ ನೋಡ ಸಂಗನಬಸವೇಶ್ವರ.