Index   ವಚನ - 37    Search  
 
ಅಯ್ಯ, ಸದ್ಗುರು ಬಸವಣ್ಣನೆ ಜಗತ್ಪಾವನ ನಿಮಿತ್ಯಾರ್ಥವಾಗಿ ಮಾದಲಾಂಬಿಕೆಯ ಹೃನ್ಮಂದಿರದಲ್ಲಿ ನೆಲಸಿರುವ ನಿಷ್ಕಲ ಕೂಡಲಸಂಗಮೇಶ್ವರಲಿಂಗದ ಚಿದ್ಗರ್ಭದಿಂದ ಸ್ವಾನುಭಾವ ಸದ್ವಾಸನೆಯನೆ ಬೀರುತ್ತ ದವನದ ವೃಕ್ಷದೋಪಾದಿಯಲ್ಲಿ ಬಾಲಬ್ರಹ್ಮತ್ವದಿಂದ ಮರ್ತ್ಯಕ್ಕೆ ಬಂದರಯ್ಯ. ಅಯ್ಯ, ಚೆನ್ನಬಸವರಾಜದೇವನೆ ಪ್ರಮಥಗಣನಿಮಿತ್ಯಾರ್ಥವಾಗಿ ಅಕ್ಕನಾಗಲೆದೇವಿಯ ಚಿದಾಕಾಶದ ವರಚೌಕಮಧ್ಯದಲ್ಲಿ ನೆಲಸಿರ್ಪ ನಿಶ್ಶೂನ್ಯ ಕೂಡಲಚೆನ್ನಸಂಗನ ಚಿದ್ಗರ್ಭದಿಂದ ಸ್ವಾನುಭಾವಸದ್ವಾಸನೆಯನೆ ಬೀರುತ್ತ ಮರುಗದ ವೃಕ್ಷದೋಪಾದಿಯಲ್ಲಿ ಬಾಲಬ್ರಹ್ಮತ್ವದಿಂದ ಮರ್ತ್ಯಕ್ಕೆ ಬಂದರಯ್ಯ. ಅಯ್ಯ, ಪ್ರಭುಸ್ವಾಮಿಗಳೆ ಇವರಿಬ್ಬರ ಪರಿಣಾಮಕ್ಕೋಸ್ಕರವಾಗಿ ಕರವೂರ ಸುಜ್ಞಾನಿಗಳ ಪಶ್ಚಿಮಸ್ಥಾನದಲ್ಲಿ ನೆಲಸಿರುವ ನಿರಂಜನ ಗುರುಗುಹೇಶ್ವರನ ಚಿದ್ಗರ್ಭದಿಂದ ಸ್ವಾನುಭಾವ ಸದ್ವಾಸನೆಯನೆ ಬೀರುತ್ತ ಪಚ್ಚೇದ ವೃಕ್ಷದೋಪಾದಿಯಲ್ಲಿ ಬಾಲಬ್ರಹ್ಮತ್ವದಿಂದ ಮರ್ತ್ಯಕ್ಕೆ ಬಂದರಯ್ಯ. ಅಯ್ಯ, ನೀಲಲೋಚನೆ, ಮುಕ್ತಾಯಕ್ಕಗಳು, ಮಹಾದೇವಿಯಕ್ಕಗಳು ಮರ್ತ್ಯಲೋಕದ ಮಹಾಗಣಂಗಳಿಗೆ ಭಕ್ತಿಜ್ಞಾನವೈರಾಗ್ಯ ಸತ್ಕ್ರಿಯಾ ಸದಾಚಾರದ ಪರಿವರ್ತನೆಯ ತೋರಬೇಕೆಂದು ಪರಶಿವಲಿಂಗದ ಚಿದ್ಗರ್ಭದಿಂದ ಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶಕ್ಕೆ ಮಿಗಿಲಾಗಿ ಸ್ವಾನುಭಾವ ಸದ್ವಾಸನೆಯನೆ ಬೀರುತ್ತ ಕಸ್ತೂರಿ ವೃಕ್ಷದೋಪಾದಿಯಲ್ಲಿ ಬಾಲಬ್ರಹ್ಮದ ಲೀಲೆಯಿಂದ ಮರ್ತ್ಯಕ್ಕವತರಿಸಿದರು ನೋಡಾ. ಅಯ್ಯ,ಸಿದ್ಧರಾಮೇಶ್ವರ, ಘಟ್ಟಿವಾಳ ಶರಣ, ಮೋಳಿಗೆಮಾರಯ್ಯ ಶರಣ ಮೊದಲಾದ ಸಮಸ್ತ ಪ್ರಮಥಗಣಂಗಳೂ ಜಗತ್ಪಾವನಾರ್ಥ ಮಹಿಮಾ ಷಟ್ಸ್ಥಲಮಾರ್ಗ ನಿಮಿತ್ಯಾರ್ಥವಾಗಿ, ಬಸವೇಶ್ವರಸ್ವಾಮಿಗಳ ಆಜ್ಞಾಮಂಟಪ ತ್ರಿಕೂಟಸಂಗಮ ಸಿಂಹಾಸನದ ಮಧ್ಯದಲ್ಲಿ ನೆಲಸಿರ್ದ ಚಿದ್ಘನಮಹಾಲಿಂಗದ ಚಿದ್ಬೆಳಗಿನೊಳಗೆ ಅನಂತಕೋಟಿ ಬರಸಿಡಿಲೊಗೆದೋಪಾದಿಯಲ್ಲಿ ಸ್ವಾನುಭಾವ ಸದ್ವಾಸನೆಯ ಪ್ರಕಾಶದಿಂದ ಸಂಪಿಗೆ, ಮೊಲ್ಲೆ, ಮಲ್ಲಿಗೆ, ಜಾಜಿ, ಬಕುಳ, ಕರವೀರ, ಸುರಹೊನ್ನೆ, ಪಾರಿಜಾತ, ತಾವರೆ, ನೈದಿಲು ಮೊದಲಾದ ಸಮಸ್ತ ಪುಷ್ಪಂಗಳುದಯದಂತೆ, ಬಳಸಿ ಬ್ರಹ್ಮವಾಗಿ ಪರಶಿವನಪ್ಪಣೆವಿಡಿದು ಮರ್ತ್ಯಲೋಕಕ್ಕವತರಿಸಿದರು ನೋಡ. ಅಯ್ಯ, ವರಕುಮಾರದೇಶಿಕೇಂದ್ರನೆ, ಗುರುಬಸವೇಶ್ವರಸ್ವಾಮಿಗಳೆ ನಿಮ್ಮ ಕರಸ್ಥಲದಲ್ಲಿ ಇಷ್ಟಲಿಂಗವಾಗಿ ಚುಳಕದಿಂದ ನೆಲಸಿರ್ಪರು ನೋಡ. ಅಯ್ಯ, ಚೆನ್ನಬಸವಸ್ವಾಮಿಗಳೆ ನಿಮ್ಮ ಮನಸ್ಥಲದಲ್ಲಿ ಪ್ರಾಣಲಿಂಗವಾಗಿ ಚುಳಕದಿಂದ ನೆಲಸಿರ್ಪರು ನೋಡ. ಅಯ್ಯ, ಅಲ್ಲಮಪ್ರಭುವೆ ನಿಮ್ಮ ಭಾವಸ್ಥಲದಲ್ಲಿ ಭಾವಲಿಂಗವಾಗಿ ಚುಳಕದಿಂದ ನೆಲಸಿರ್ಪರು ನೋಡ. ಅಯ್ಯ, ನೀಲಾಂಬಿಕೆ-ಮುಕ್ತಾಯಕ್ಕ-ಮಹಾದೇವಿಯಕ್ಕಗಳೆ ನಿಮ್ಮ ತ್ರಿವಿಧಚಕ್ಷುವಿನಲ್ಲಿ ಕರುಣಾಜಲ-ವಿನಯಜಲ-ಸಮತಾಜಲ ಮೊದಲಾದ ಹತ್ತುತೆರದಿಂದ ಪರಮಗಂಗಾತೀರ್ಥವಾಗಿ ಚುಳಕದಿಂದ ನೆಲಸಿರ್ಪರು ನೋಡ. ಅಯ್ಯ, ಸಿದ್ಧರಾಮೇಶ್ವರ, ಘಟ್ಟಿವಾಳಯ್ಯ, ಶರಣ ಮೋಳಿಗಪ್ಪ ಮೊದಲಾದ ಸಮಸ್ತ ಪ್ರಮಥಗಣಂಗಳೆಲ್ಲ ನಿನ್ನ ಹೃದಯಕಮಲ ಮಧ್ಯದಲ್ಲಿ ಶುದ್ಧ-ಸಿದ್ಧ-ಪ್ರಸಿದ್ಧ ಮೊದಲಾದ ಹನ್ನೊಂದು ತೆರದಿಂದ ಮಹಾಚಿದ್ಘನ ಪ್ರಸಾದವಾಗಿ ಚುಳಕಮಾತ್ರದಿಂದ ನೆಲಪಿರ್ಪರು ನೋಡ ಸಂಗನಬಸವೇಶ್ವರ