Index   ವಚನ - 55    Search  
 
ಅಯ್ಯ, ಬಸವ ಮೊದಲಾದ ಪ್ರಮಥಗಣಾರಾಧ್ಯರ ಸನ್ಮಾರ್ಗಾಚಾರಕ್ಕೆ ದೃಢಚಿತ್ತದಿಂದ ನಿಂದು, ನಿರಾಭಾರಿವೀರಶೈವ ಷಟ್ಸ್ಥಲಮಾರ್ಗದಲ್ಲಿ ಆಚರಿಸುವ ಶರಣಗಣಂಗಳಲ್ಲಿ ಪಂಚಸೂತಕಂಗಳ ಕಲ್ಪಿಸದೆ, ಭೃತ್ಯಾಚಾರ ಮುಂದುಗೊಂಡು, ಅವರೊಕ್ಕುಮಿಕ್ಕುದ ಹಾರೈಸಿ, ನಿಜಭಕ್ತಿಯಲ್ಲಿ ನಿಂದು, ದೃಢಚಿತ್ತನಾಗಿ, ಸನ್ಮಾರ್ಗಾಚಾರಕ್ಕೆ ಬಾರದಂಥ ಗುರು-ಚರ-ಪರ-ಭಕ್ತ-ಗಣ ಬಂಧು-ಬಳಗ, ತಂದೆ-ತಾಯಿ, ಪುತ್ರ, ಮಿತ್ರ, ಕಳತ್ರ, ಶಿಷ್ಯ ಮೊದಲಾಗಿ, ತೃಣಕ್ಕೆ ಸಮಮಾಡಿ ತ್ಯಜಿಸಿ, ಮನದ ಮಧ್ಯದಲ್ಲಿ ಹುಟ್ಟಿದ ಕಾಮ, ಕ್ರೋಧ, [ಲೋಭ] ಮೋಹ, ಮದ, ಮತ್ಸರಂಗಳ ಬಲೆಗೆ ಸಿಲ್ಕದೆ, ತ್ರಿಕರಣದ ಪವಿತ್ರತೆಯಿಂದ ಅಷ್ಟಾವರಣದ ಸ್ತೋತ್ರವ ಮಾಡುವಂಥಾದೆ ಸಮಯದೀಕ್ಷೆ. ಇಂತುಟೆಂದು ಶ್ರೀಗುರು ನಿಷ್ಕಳಂಕ ನಿರಾಲಂಬ ಚೆನ್ನಬಸವರಾಜೇಂದ್ರನು ನಿರ್ಲಜ್ಜಶಾಂತಲಿಂಗದೇಶಿಕೋತ್ತಮಂಗೆ ನಿರೂಪಮಂ ಕೊಡುತಿರ್ದರು ನೋಡ ಸಂಗನಬಸವೇಶ್ವರ.