Index   ವಚನ - 54    Search  
 
ಅಯ್ಯ, ಘನಮಹಾ ಇಷ್ಟಲಿಂಗವೆ ನಿನ್ನ ನಾದ-ಬಿಂದು-ಕಳೆಗಳಿಗೆ ಚೈತನ್ಯಸ್ವರೂಪು ನೋಡ. ಈ ಲಿಂಗದ ವೃತ್ತದಲ್ಲಿ ಸಕಲಲೋಕಂಗಳು, ಸಕಲಮನುಗಳು ಅಡಗಿರ್ಪವು ನೋಡ. ಈ ಲಿಂಗವೆ ನಿನ್ನ ಹರಕಿರಣ ಚೈತನ್ಯಸ್ವರೂಪು ನೋಡ. ಈ ಲಿಂಗವೆ ನಿನ್ನ ಸಂಜೀವನ-ಕಾಮಧೇನು-ಕಲ್ಪವೃಕ್ಷ ನೋಡ. ಇಂತು ನಿನ್ನ ಕರಸ್ಥಲದಲ್ಲಿ ರಾಜಿಸುವ ಪರಶಿವಲಿಂಗದೇವಂಗೆ ಜಂಗಮದ ಪಾದೋದಕ ಪ್ರಸಾದವೆ ಪರಮಚಿದೈಶ್ವರ್ಯ ನೋಡ. ಇಂತು ಜಂಗಮಕ್ಕೆ ಭೃತ್ಯಾಚಾರಮೂರ್ತಿಲಿಂಗದೇವನ ಒಕ್ಕು ಮಿಕ್ಕ ಕರುಣಜಲ ಕರುಣಪ್ರಸಾದವೆ ನಿನಗರ್ಪಿತವಯ್ಯ. ನಿನ್ನ ಪರಿಣಾಮ ಸಂತೋಷವೆ ಲಿಂಗಾರ್ಪಿತವಯ್ಯ. ಇಂತಪ್ಪ ಲಿಂಗದೇವನ ನಿನ್ನ ಷಟ್ಸ್ಥಾನಂಗಳಲ್ಲಿ ಧರಿಸಿ, ಲಿಂಗವೆ ನಿನಗೆ ಪ್ರಾಣವಾಗಿ, ನೀನೆ ಲಿಂಗಕ್ಕೆ ಪ್ರಾಣವಾಗಿ, ಸತ್ಯದಿಂದ ಬಂದ ಪದಾರ್ಥವ ದಾಸೋಹಂ ಭಾವದಿಂದ ಸಮುದ್ರದುದಕವ ಸಮುದ್ರಕ್ಕೆ ಅರ್ಪಿಸಿದಂತೆ, ಧಾನ್ಯದ ರಾಶಿಯ ಒಳಗಣ ಧಾನ್ಯವ ತಂದು ಪಾಕವಮಾಡಿ ಮತ್ತಾ ರಾಶಿಗೆ ಅರ್ಪಿಸಿದಂತೆ, ಆ ಲಿಂಗಜಂಗಮದ ಪಾದೋದಕ ಪ್ರಸಾದವ ಮತ್ತಾ ಲಿಂಗಜಂಗಮಕ್ಕೆ ಸಮರ್ಪಿಸಿ, ಆ ಲಿಂಗಜಂಗಮದ ಪರಿಣಾಮ ಮಹಾಪ್ರಸಾದದಲ್ಲಿ ನಿತ್ಯ ಸಂತೃಪ್ತನಾಗಿರುವಂಥಾದೆ ಲಿಂಗಸ್ವಾಯತದೀಕ್ಷೆ. ಇಂತುಟೆಂದು ಶ್ರೀ ಗುರು ನಿಷ್ಕಳಂಕ ಚನ್ನಬಸವರಾಜೇಂದ್ರನು ನಿರ್ಲಜ್ಜಶಾಂತಲಿಂಗದೇಶಿಕೋತ್ತಮಂಗೆ ನಿರೂಪಮಂ ಕೊಡುತಿರ್ದರು ನೋಡ ಸಂಗನಬಸವೇಶ್ವರ