Index   ವಚನ - 61    Search  
 
ಅಯ್ಯ, ಸತ್ತುಚಿತ್ತಾನಂದ ನಿತ್ಯಪರಿಪೂರ್ಣವೆಂಬ ಪಂಚಾಂಗವನಂಗೀಕರಿಸಿಕೊಂಡಿರುತ್ತಿಹ ಪರಬ್ರಹ್ಮಲಿಂಗದಲ್ಲಿ ಸಮರಸಸಂಗದಿಂದ ಕೂಟವ ಕೂಡಿದ ಅವಿರಳ ಪರಂಜ್ಯೋತಿಸ್ವರೂಪ ಶರಣನ ನಿಲುಕಡೆ ಎಂತೆಂದಡೆ: ಅಣುಮಾತ್ರ ಸತ್ಯ ನಡೆ ನುಡಿಗಳ ತೊಲಗನಯ್ಯ. ದೃಢಚಿತ್ತದಿಂದ ಕೊಟ್ಟ ಭಾಷೆಗಳ ಬಡಮನದ ಸಂಗವಮಾಡಿ ಹುಸಿ ನುಡಿಯ ನುಡಿಯನಯ್ಯ. ನಿಜನೈಷ್ಠಾಪರತ್ವದಿಂದ ಸತ್ಕಾಯಕ, ಸತ್ಪಾತ್ರಭಕ್ತಿ, ಸತ್ಕ್ರಿಯಾಜ್ಞಾನಾಚಾರಂಗಳ ಅವಾಂತರದಲ್ಲಿ ನಿಂದ್ಯ ಕುಂದು ದರಿದ್ರ ರೋಗ ರುಜೆ ವಿಪತ್ತು ಹಾಸ್ಯ ರೋಷಂಗಳು ಬಂದು ತಟ್ಟಿದಲ್ಲಿ ಶ್ರೀಗುರುಲಿಂಗಜಂಗಮದ ಕರುಣಕಟಾಕ್ಷೆಯಿಂದ ಬಂದುದ ಮಹಾಪ್ರಸಾದವೆಂದು ಲಿಂಗಭೋಗಿಯಾಗಿರುವನಲ್ಲದೆ ಶೈವ ಜಡಕರ್ಮಭೂತಪ್ರಾಣಿಗಳಂತೆ ಸತ್ಕಾಯಕ, ಸತ್ಪಾತ್ರಭಕ್ತಿ, ಸತ್ಕ್ರಿಯಾ, ಜ್ಞಾನ ಆಚಾರಂಗಳ ನಿಮಿಷಾರ್ಧವಗಲುವನಲ್ಲ ನೋಡ. ಕುಲಛಲಕ್ಕಾಡದೆ, ಶಿವಶರಣರಲ್ಲಿ ಜಾತಿ ಸೂತಕವ ಬಳಸದೆ, ದುಷ್ಕಾಯಕ, ಅಕ್ರಿಯಾ, ಅಜ್ಞಾನ, ಅನಾಚಾರಂಗಳನನುಕರಿಸಿ, ಉದರಪೋಷಣಕ್ಕೆ, ಲಾಂಛನದಿಚ್ಛೆಗೆ ನುಡಿದು, ಸಮಪಂಕ್ತಿಯ ಮಾಡದೆ, ಪರಮಾನಂದ ಸುಖಾಬ್ಧಿಯಲ್ಲಿ ಮುಳುಗಿ, ಅಷ್ಟಾವಧಾನ ಎಚ್ಚರಗುಂದದೆ, ಮನಪ್ರಾಣಲಿಂಗವಾದುದೀಗ ಸತ್ಯಶುದ್ಧದೀಕ್ಷೆ. ಇಂತುಟೆಂದು ಶ್ರೀಗುರು ನಿಷ್ಕಳಂಕ ನಿಜಾನಂದಮೂರ್ತಿ ಚನ್ನಬಸವರಾಜೇಂದ್ರನು ನಿರ್ಲಜ್ಜಶಾಂತಲಿಂಗದೇಶಿಕೋತ್ತಮಂಗೆ ನಿರೂಪಮಂ ಕೊಡುತಿರ್ದರು ನೋಡ ಸಂಗನಬಸವೇಶ್ವರ.