Index   ವಚನ - 72    Search  
 
ಅಯ್ಯ, ನಿವೃತ್ತಿಮಾರ್ಗದಲ್ಲಿ ಚರಿಸುವ ಊರ್ಧ್ವಕುಂಡಲಿ ಭೇದವೆಂತೆಂದಡೆ : ಕಿಂಕುರ್ವಾಣಭಕ್ತಿಯೆ ಅಂಗವಾಗಿರ್ಪುದಯ್ಯ. ಸದ್ಗುಣವೆ ಪ್ರಾಣವಾಗಿರ್ಪುದಯ್ಯ. ಸದ್ಧರ್ಮವೆ ಸಂಗವಾಗಿರ್ಪುದಯ್ಯ. ಸಚ್ಚಿದಾನಂದವೆ ವಸ್ತ್ರಾಭರಣವಾಗಿರ್ಪುದಯ್ಯ. ಸನ್ಮಾರ್ಗಾಚಾರಂಗಳೆ ನಡೆನುಡಿಯಾಗಿರ್ಪುದಯ್ಯ. ಸುಸತ್ಯವೆ ವಾಹನವಾಗಿರ್ಪುದಯ್ಯ. ದಯಾಂತಃಕರಣವೆ ಪಿತಮಾತೆಯಾಗಿರ್ಪುದಯ್ಯ. ಸುಚಿತ್ತಂಗಳೆ ಬಂಧುಬಳಗವಾಗಿರ್ಪುದಯ್ಯ. ಸುಬುದ್ಧಿಗಳೆ ಒಡಹುಟ್ಟಿದರಾಗಿರ್ಪುದಯ್ಯ. ನಿರಹಂಕಾರಂಗಳೆ ನಂಟರಾಗಿರ್ಪುದಯ್ಯ. ಸುಮನವೆ ಸ್ತ್ರೀಯಳಾಗಿರ್ಪುದಯ್ಯ. ಸುಜ್ಞಾನವೆ ಮಂದಿರವಾಗಿರ್ಪುದಯ್ಯ. ಸದ್ಭಾವವೆ ಆಹಾರವಾಗಿರ್ಪುದಯ್ಯ. ನಿತ್ಯನಿಜವೇ ದೈವವಾಗಿರ್ಪುದಯ್ಯ. ನಿರಾಸೆಯೆ ಅವಯವಂಗಳಾಗಿರ್ಪುದಯ್ಯ. ನಿಷ್ಕಾಮಂಗಳೆ ಧನಧಾನ್ಯಂಗಳಾಗಿರ್ಪುದಯ್ಯ. ಇಂತು ನಿಸ್ಸಂಸಾರವೆಂಬ ಅವಿರಳಾನಂದದಿಂದ ಸದ್ಗುರು ಉಪಾವಸ್ತೆಯ ಮಾಡುವ ಸಜ್ಜೀವನೆ ಊರ್ಧ್ವಕುಂಡಲಿಸರ್ಪನೆನಿಸುವುದಯ್ಯ. ಆ ಸರ್ಪನೆ ಮಾಯಾಪ್ರಪಂಚ ಹೇವರಿಸಿ ಅನಂತಮುಖದಿಂದ ನಿರ್ಮಾಯಸ್ವರೂಪವಾದ ಮಹಾಪ್ರಮಥಗಣಂಗಳತ್ತ ಅಭಿಮುಖವಾಗಿರ್ಪುದಯ್ಯ. ಈ ಸರ್ಪಂಗೆ ಬೇಕುಬೇಡವೆಂಬ ಜೀಹ್ವಾಲಂಪಟ-ಗುಹ್ಯಲಂಪಟವಿಲ್ಲ ನೋಡ, ಸಂಗನಬಸವೇಶ್ವರ.