ಅಯ್ಯ, ನಿರ್ವಂಚಕತ್ವದಿಂದ ದಶವಿಧಲಿಂಗಗಳಿಗೆ
ಏಕವಿಂಶತಿ ಮಂತ್ರಸ್ಮರಣೆಯಿಂದ ದಶವಿಧಪಾದೋದಕವನರ್ಪಿಸಿ,
ಸಂತೃಪ್ತಾನಂದಜಲದಲ್ಲಿ ಪರಿಣಾಮಿಸಬಲ್ಲಡೆ
ನಿಜಪ್ರಸಾದಿಯೆಂಬೆನಯ್ಯ.
ಅದರ ವಿಚಾರವೆಂತೆಂದಡೆ :
ಏಕವಿಂಶತಿ ಪ್ರಣಮದೊಳಗೆ ಷಡ್ವಿಧಪ್ರಣಮಸ್ಮರಣೆಯಿಂದ
ಸ್ವರ್ಶನೋದಕ ಅವಧಾರೋದಕ-ಗುರುಪಾದೋದಕವ
ಆಚಾರಲಿಂಗ-ಗುರುಲಿಂಗ-ಇಷ್ಟಲಿಂಗದೇವಂಗೆ ಅರ್ಪಿಸಿ,
ತಾನಾ ಪರಿಣಾಮದಲ್ಲಿ ಲೋಲುಪ್ತನಾದಡೆ
ಅನಾದಿಗುರುಲಿಂಗಸ್ವರೂಪ ಬಸವಣ್ಣನೆಂಬೆ ನೋಡ.
ದಶಪಂಚಪ್ರಣಮದೊಳಗೆ ಷಡ್ವಿಧಪ್ರಣಮಸ್ಮರಣೆಯಿಂದ
ಆಪ್ಯಾಯನೋದಕ-ಹಸ್ತೋದಕ-ಲಿಂಗಪಾದೋದಕವ
ಶಿವಲಿಂಗ-ಜಂಗಮಲಿಂಗ-ಪ್ರಾಣಲಿಂಗದೇವಂಗೆ ಸಮರ್ಪಿಸಿ
ತಾನಾ ಪರಿಣಾಮದಲ್ಲಿ ಲೋಲುಪ್ತನಾದಡೆ
ಅನಾದಿಲಿಂಗಸ್ವರೂಪ ಚೆನ್ನಬಸವಣ್ಣನೆಂಬೆ ನೋಡ.
ನವವಿಧಪ್ರಣಮದೊಳಗೆ ಷಡ್ವಿಧಪ್ರಣಮಸ್ಮರಣೆಯಿಂದ
ಪರಿಣಾಮೋದಕ-ನಿರ್ನಾಮೋದಕ-ಜಂಗಮಪಾದೋದಕವ
ಪ್ರಸಾದಲಿಂಗ-ಮಹಾಲಿಂಗ ಭಾವಲಿಂಗದೇವಂಗೆ ಸಮರ್ಪಿಸಿ,
ತಾನಾ ಸಂತೃಪ್ತಿಯಲ್ಲಿ ಲೋಲುಪ್ತನಾದಡೆ
ಅನಾದಿಜಂಗಮಸ್ವರೂಪ ಅಲ್ಲಮಪ್ರಭುರಾಯನೆಂಬೆ ನೋಡಾ.
ಇನ್ನು ಉಳಿದ ತ್ರಿವಿಧಪ್ರಣಮಸ್ಮರಣೆಯಿಂದ
ನವವಿಧೋದಕವನೊಳಕೊಂಡ ಸತ್ಯೋದಕವ
ನವವಿಧಲಿಂಗಕ್ಕೆ ಮಾತೃಸ್ವರೂಪವಾದ
ನಿಃಕಲಪರತತ್ವಲಿಂಗದೇವಂಗೆ ಸಮರ್ಪಿಸಿ,
ನಿತ್ಯತೃಪ್ತತ್ವದಿಂದ ಸರ್ವಾವಸ್ಥೆಯ ನೀಗಬಲ್ಲಡೆ
ಅನಾದಿಶರಣಪ್ರಸನ್ನ ಮೂರ್ತಿಯೆಂಬೆ ನೋಡ
ಸಂಗನಬಸವೇಶ್ವರ.
Art
Manuscript
Music
Courtesy:
Transliteration
Ayya, nirvan̄cakatvadinda daśavidhaliṅgagaḷige
ēkavinśati mantrasmaraṇeyinda daśavidhapādōdakavanarpisi,
santr̥ptānandajaladalli pariṇāmisaballaḍe
nijaprasādiyembenayya.
Adara vicāraventendaḍe:
Ēkavinśati praṇamadoḷage ṣaḍvidhapraṇamasmaraṇeyinda
svarśanōdaka avadhārōdaka-gurupādōdakava
ācāraliṅga-guruliṅga-iṣṭaliṅgadēvaṅge arpisi,
tānā pariṇāmadalli lōluptanādaḍe
anādiguruliṅgasvarūpa basavaṇṇanembe nōḍa.
Daśapan̄capraṇamadoḷage ṣaḍvidhapraṇamasmaraṇeyinda
āpyāyanōdaka-hastōdaka-liṅgapādōdakava
śivaliṅga-jaṅgamaliṅga-prāṇaliṅgadēvaṅge samarpisiTānā pariṇāmadalli lōluptanādaḍe
anādiliṅgasvarūpa cennabasavaṇṇanembe nōḍa.
Navavidhapraṇamadoḷage ṣaḍvidhapraṇamasmaraṇeyinda
pariṇāmōdaka-nirnāmōdaka-jaṅgamapādōdakava
prasādaliṅga-mahāliṅga bhāvaliṅgadēvaṅge samarpisi,
tānā santr̥ptiyalli lōluptanādaḍe
anādijaṅgamasvarūpa allamaprabhurāyanembe nōḍā.
Innu uḷida trividhapraṇamasmaraṇeyinda
Navavidhōdakavanoḷakoṇḍa satyōdakava
navavidhaliṅgakke mātr̥svarūpavāda
niḥkalaparatatvaliṅgadēvaṅge samarpisi,
nityatr̥ptatvadinda sarvāvastheya nīgaballaḍe
anādiśaraṇaprasanna mūrtiyembe nōḍa
saṅganabasavēśvara.