Index   ವಚನ - 75    Search  
 
ಅಯ್ಯ, ಚಿದ್ಘನತೀರ್ಥವ ಇಷ್ಟಲಿಂಗಾರ್ಪಿತವ ಮಾಡುವ ವಿಚಾರವೆಂತೆಂದಡೆ : ಗುರುಲಿಂಗಮುಖದಲ್ಲಿ ಅಚ್ಚಪ್ರಸಾದಸ್ವರೂಪವಾದ ಇಷ್ಟಲಿಂಗಕ್ಕೆ ಅರ್ಪಿತವಯ್ಯ. ಗುರುಲಿಂಗ ಶಿವಲಿಂಗಮುಖದಲ್ಲಿ ಆಚರಣೆಸಂಬಂಧದಿಂದ ನಿಚ್ಚಪ್ರಸಾದ ಸಮಯಪ್ರಸಾದಸ್ವರೂಪವಾದ ಇಷ್ಟಲಿಂಗಕ್ಕೆ ಅರ್ಪಿತವಯ್ಯ. ಗುರುಲಿಂಗ-ಶಿವಲಿಂಗ-ಜಂಗಮಲಿಂಗಮುಖದಲ್ಲಿ ತ್ರಿವಿಧಾಚರಣೆಯ ಕರ್ತುವಾದುದರಿಂ ಸ್ವಯಚರಪರ ಗುರುಚರಮೂರ್ತಿ ಚಿತ್ಕಲಾಪ್ರಸಾದಸ್ವರೂಪವಾದ ಇಷ್ಟಲಿಂಗದೇವಂಗರ್ಪಿತವಯ್ಯ. ಆ ನಿಲುಕಡೆಯೆಂತೆಂದಡೆ : ಶ್ರೀಗುರುಲಿಂಗಜಂಗಮವು ಹಸ್ತಮಸ್ತಕಸಂಯೋಗವಮಾಡಿ, ವೇಧಾ-ಮಂತ್ರ-ಕ್ರಿಯಾದೀಕ್ಷೆಯ ಕರುಣಿಸುವಲ್ಲಿ, ಕರಕಮಲದ ದಶಾಂಗುಲ ಮಧ್ಯ ಮೊದಲಾಗಿ ದ್ವಾದಶಪ್ರಣಮಲಿಂಗಮೂರ್ತಿಗಳ ಛತ್ತೀಶಪ್ರಣಮರೂಪಿನಿಂದ ಸಂಬಂಧಿಸಿರ್ಪರಯ್ಯ. ಇಂತು ಸಂಬಂಧವ ಗುರುಕಟಾಕ್ಷೆಯಿಂ ತಿಳಿದು ಷಡಾಕ್ಷರ ಮಂತ್ರಸ್ವರೂಪವಾದ ದಕ್ಷಿಣಹಸ್ತದಿಂದ ಷಡಾಕ್ಷರ ಮಂತ್ರಸ್ವರೂಪವಾದ ವಾಮಹಸ್ತಕಮಲಮಧ್ಯದಲ್ಲಿ ನೆಲಸಿರ್ಪ ಚಿದ್ಘನಮಹಾ ಇಷ್ಟಲಿಂಗದೇವಂಗೆ ಆಯಾಯಸ್ಥಲ ಬಂದು ಒದಗಿದಲ್ಲಿ ಮಕಾರ-ಶಿಕಾರ-ವಕಾರ ; ಅನಾಮಿಕ-ಮಧ್ಯಾಂಗುಲ-ತರ್ಜನಿ ಮೊದಲಾದ ತ್ರಿವಿಧಂಗುಲಿಗಳಲ್ಲಿ, ತ್ರಿವಿಧಲಿಂಗಮಂತ್ರಗಳಿಂದ ಇಷ್ಟಮಹಾಲಿಂಗಾರೋಪಿತವ ಮಾಡಿ ಭೋಗಿಸಬಲ್ಲಡೆ ಅಚ್ಚ ಸ್ವಯಂಭು ಪ್ರಸಾದಲಿಂಗ ಶರಣರೆಂಬೆ ನೋಡ ಸಂಗನಬಸವೇಶ್ವರ.