Index   ವಚನ - 86    Search  
 
ಅಯ್ಯ, ದಂಡಾಕೃತಿ, ಮಕಾರಪ್ರಣಮ, ಘಂಟಾನಾದ, ಸ್ವಾಧಿಷ್ಠಾನಚಕ್ರ, ಶ್ವೇತವರ್ಣ, ಮಹೇಶ್ವರಸ್ಥಲ, ಸ್ಥೂಲತನು, ಸುಬುದ್ಧಿಹಸ್ತ, ಗುರುಲಿಂಗ, ಜಿಹ್ವೆಮುಖ, ನೈಷ್ಠಿಕಾಭಕ್ತಿ, ಸುರಸಪದಾರ್ಥ, ಸುರಸಪ್ರಸಾದ, ವಿಷ್ಣುಪೂಜಾರಿ, ವಿಷ್ಣುವಧಿದೇವತೆ, ಕತೃಸಾದಾಖ್ಯ, ಚಿತ್ತವೆಂಬ ಲಕ್ಷಣ, ಗೂಢವೆಂಬ ಸಂಜ್ಞೆ, ಪಶ್ಚಿಮದಿಕ್ಕು, ಯಜುರ್ವೇದ, ಅಪ್ಪುವೆ ಅಂಗ, ಅಂತರಾತ್ಮ, ಜ್ಞಾನಶಕ್ತಿ, ಪ್ರತಿಷ್ಠೆಕಲೆ ಇಂತು ಇಪ್ಪತ್ತುನಾಲ್ಕು ಸಕೀಲಂಗಳನೊಳಕೊಂಡು ಎನ್ನ ಸ್ವಾಧಿಷ್ಠಾನಚಕ್ರವೆಂಬ ಸೇತುಬಂಧಕ್ಷೇತ್ರದಲ್ಲಿ ಮೂರ್ತಿಗೊಂಡಿರ್ದ ಮಂತ್ರಮೂರ್ತಿಸ್ವರೂಪವಾದ ಗುರುಲಿಂಗವೆ ರಾಮೇಶ್ವರಲಿಂಗವೆಂದು ತನುತ್ರಯವ ಮಡಿಮಾಡಿ, ಪರಿಣಾಮವೆಂಬ ಜಲದಿಂ ಮಜ್ಜನಕ್ಕೆರದು, ಅಪ್ಪು ನಿವೃತ್ತಿಯಾದ ಗಂಧವ ಧರಿಸಿ, ಬುದ್ಧಿ ಸುಬುದ್ಧಿಯಾದಕ್ಷತೆಯನಿಟ್ಟು, ಅಲ್ಲಿಹ ಷಡ್ದಳಂಗಳನೆ ಪುಷ್ಪದ ಮಾಲೆಯೆಂದು ಧರಿಸಿ, ಅಲ್ಲಿಹ ಕಮಲಸದ್ವಾಸನೆಯ ಧೂಪವ ಬೀಸಿ, ಅಲ್ಲಿಹ ಶ್ವೇತವರ್ಣವೆ ಕರ್ಪೂರದ ಜ್ಯೋತಿಯೆಂದು ಬೆಳಗಿ, ಅಲ್ಲಿಹ ಸ್ವಪ್ನಾವಸ್ಥೆಯೆಂಬ ನವೀನ ವಸ್ತ್ರವ ಹೊದ್ದಿಸಿ, ನಿಃಕ್ರೋಧವೆಂಬಾಭರಣವ ತೊಡಿಸಿ, ಸುರುಚಿಯೆಂಬ ನೈವೇದ್ಯವನರ್ಪಿಸಿ, ನೈಷ್ಠೆಯೆಂಬ ತಾಂಬೂಲವನಿತ್ತು, ಇಂತು ಗುರುಲಿಂಗಕ್ಕೆ ಅಷ್ಟವಿಧಾರ್ಚನೆಯಂ ಮಾಡಿ, ಕೋಟಿ ಸೂರ್ಯನ ಪ್ರಭೆಯಂತೆ ಬೆಳಗುವ ಗುರುಲಿಂಗಮೂರ್ತಿಯನ್ನು ಕಂಗಳು ತುಂಬಿ ನೋಡಿ, ಮನದಲ್ಲಿ ಸಂತೋಷಂಗೊಂಡು ಆ ಗುರುಲಿಂಗ ಪೂಜೆಯ ಸಮಾಪ್ತವ ಮಾಡಿ ಓಂ ಮಂ ಮಂ ಮಂ ಮಂ ಮಂ ಮಂ ಎಂಬ ಮಕಾರ ಷಡ್ವಿಧಮಂತ್ರಂಗಳಿಂದೆ ನಮಸ್ಕರಿಸಿ, ಆ ಲಿಂಗವೆ ತಾನೆಂದರಿದು ಕೂಡಿ ಎರಡಳಿದು ನಿಶ್ಚಿಂತದಿಂದ ಬೆರಸಬಲ್ಲಾತನೆ ನೈಷ್ಠಾಭಕ್ತಿಯನುಳ್ಳ ವೀರಮಾಹೇಶ್ವರ ನೋಡ ಸಂಗನಬಸವೇಶ್ವರ.