Index   ವಚನ - 2    Search  
 
ನಾನು ಭಕ್ತ, ನಾನು ಶರಣ, ನಾನು ಐಕ್ಯನೆಂದು ಹೆಸರಿಟ್ಟುಕೊಂಬುವ ಅಣ್ಣಗಳು ನೀವು ಕೇಳಿರೋ. ತನ್ನಲಿದ್ದ ಮೂಲಚಕ್ರದ ಮೂಲಭೇದವನರಿಯಬಲ್ಲಡೆ, ಭಕ್ತನಿಂದೆನಿಸಬಹುದು. ಅಷ್ಟದಳಕಮಲದಲ್ಲಿ ನಿಟ್ಟಿಸಿದ್ದ ಪ್ರಾಣದ ನೆಲೆಯನರಿಯಬಲ್ಲಡೆ, ಶರಣ[ನೆಂ]ದೆನಿಸಬಹುದು. ಇಡಾ ಪಿಂಗಳ ಸುಷುಮ್ನ ತ್ರಿವಿಧವನೊಂದುಗೂಡಿ, ಏಕನಾಳದೊ[ಳು] ತುಂಬಿ. ಯಜ್ಜಯಿಲ್ಲದ ಮಣಿಯ ಆ ಹುರಿಯಲ್ಲಿ ಪೋಣಿಸಿ, ಊರ್ಧ್ವಮುಖದಲ್ಲಿ ಎತ್ತಿ, ಪಂಚದ್ವಾರದ ಕದವ ತೆರದು, ತ್ರಿಕೂಟದಲ್ಲಿರ್ದ ಮಹಾಲಿಂಗವ ನಿರೀಕ್ಷಣವಮಾಡಬಲ್ಲಡೆ, ಐಕ್ಯನೆಂದೆನಿಸಬಹುದು. ಇಂತಪ್ಪ ಭೇದಂಗಳನರಿಯದೆ, ನಾನು ಭಕ್ತ, ನಾನು ಶರಣ, ನಾನು ಐಕ್ಯನೆಂದು ಹುಸಿಯ ನುಡಿವವರ ನೋಡಿ ಬೆರಗಾದ, ನಮ್ಮ ಗೊಹೇಶ್ವರಪ್ರಿಯ ನಿರಾಳಲಿಂಗ.