ಮನಹೀನ ಬಂಟನ ಕೈಯಲ್ಲಿ ಬತ್ತೀಸಾಯುಧವಿದ್ದರೇನಯ್ಯ?
ಜಾರಸ್ತ್ರೀ ಸರ್ವಾಭರಣವನಿಟ್ಟಿದ್ದರೇನಯ್ಯ?
ಕುರುಡನ ಕೈಯಲ್ಲಿ ದರ್ಪಣವಿದ್ದರೇನಯ್ಯ?
ಧರ್ಮವನರಿಯದವನ ಕೈಯಲ್ಲಿ ಹಣವಿದ್ದರೇನಯ್ಯ?
ಜ್ಞಾನಹೀನ ರೂಪಧರಿಸಿದ್ದರೇನಯ್ಯ?
ಪ್ರಾಣಲಿಂಗವನರಿಯದ ನರಗುರಿಗಳು ಅಂಗದ ಮೇಲೆ
ಲಿಂಗವ ಕಟ್ಟಿದ್ದರೇನಯ್ಯ?
ಇಂತೀ ಷಡ್ವಿಧ ಭೇದವನರಿಯದ ಭವಿಗಳು
ನಿಮ್ಮ ಹೊಲಬನವರೆತ್ತಬಲ್ಲರಯ್ಯ?
ಇಟ್ಟು ಪೂಜೆಯ ಮಾಡುವ ಆ ದ್ರೋಹಿಗಳಿಗೆ
ನಾನೇನೆಂಬೆನಯ್ಯ ಗೊಹೇಶ್ವರಪ್ರಿಯ ನಿರಾಳಲಿಂಗಾ