ಇಷ್ಟಲಿಂಗವೆಂಬ ಭ್ರಾಂತಿಗೇಡಿಗಳು ನೀವು ಕೇಳಿರೋ.
ಇಷ್ಟಲಿಂಗದ ಪೂಜೆಯ ನಿಷ್ಠೆಯಲ್ಲಿ ಮಾಡಿದರೆ
ಅಷ್ಟೈಶ್ವರ್ಯ ದೊರಕೊಂಬುದೇನಯ್ಯ?
ಪ್ರಾಣಲಿಂಗದ ನೆಲೆಯನರಿತು ಪೂಜೆಯಂ ಮಾಡಲು
ಸಕಲ ಭವಬಂಧನಗಳು ಬಿಟ್ಟು ಚತುರ್ವಿಧ ಫಲಂಗಳು
ಆ ಶರಣನ ಬಟ್ಟೆಯ ಸೋಂಕಲೊಲ್ಲವು.
ಇದು ಕಾರಣ ಅಂಗಸಂಗವಾಗಿರ್ದ ಪ್ರಾಣ ಬಿಟ್ಟುಹೋಗುವಾಗ
ಅಂಗವೊಂದೆಸೆಯಾಗಿ ಪ್ರಾಣವೊಂದೆಸೆಯಾಗಿ ಬಿದ್ದು
ಹೋಗುವುದ ಕಂಡು ನಾಚಿತ್ತು ಎನ್ನ ಮನವು.
ಇದು ಕಾರಣ ಪ್ರಾಣಲಿಂಗದ ಸಂಬಂಧದ ಭೇದವ
ನಮ್ಮ ಪೂರ್ವಾಚಾರ್ಯ ಸಂಗನಬಸವಣ್ಣನ ಸಂತತಿಗಳಿಗಲ್ಲದೆ
ಉಳಿದಂಥ ತಾಮಸದೇಹಿಗಳಿಗೆ ಅರಿಯಬಾರದಯ್ಯ
ಗೊಹೇಶ್ವರಪ್ರಿಯ ನಿರಾಳಲಿಂಗಾ.