Index   ವಚನ - 4    Search  
 
ಆವ ಬಗೆ ಭಾವ ಬಲ್ಲತನ ಅಳವಟ್ಟಲ್ಲಿ ರಾಗವಿರಾಗವೆಂಬುದಿಲ್ಲ. ಸುಖ ಸುಮ್ಮಾನ ರುಜೆ ರೋಗ ತಾಗು ನಿರೋಧ ಬಂದಲ್ಲಿ ಶೋಕ ಮೋಹಾದಿಗಳು ವರ್ತಿಸಿದಲ್ಲಿ ಜ್ಯೋತಿಯ ಬುಡದಂತೆ; ರಜ್ಜು ತೈಲ ಅಗ್ನಿ ಉಳ್ಳನ್ನಕ್ಕ ಉರಿದು ಆ ಬುಡ ಹೊದ್ದದಂತೆ. ಈ ಸಂಸಾರದ ಬುಡದಲ್ಲಿ ನಾನಾ ವಿಕಾರತ್ರಯದ ಗುಣದಲ್ಲಿ ನೀರಿನೊಳಗಿರ್ದು ಈಸುವನಂತೆ ಬಂಧ ಮೋಕ್ಷ ಕರ್ಮಂಗಳಲ್ಲಿ ದ್ವಂದ್ವಿತನಲ್ಲದೆ, ನಿಂದ ನಿಜೈಕ್ಯಂಗೆ ಹಿಂದು ಮುಂದೆಂಬ ಬಂಧವಿಲ್ಲ. ಗೋರಕ್ಷಪಾಲಕ ಮಹಾಪ್ರಭು ಸಿದ್ಧಸೋಮನಾಥ- ಲಿಂಗವಾದವಂಗೆ.