Index   ವಚನ - 3    Search  
 
ಕಪಿ ಕಳ್ಳ ಕುಡಿದು, ಕಡಲ ದಾಂಟುವೆನೆಂದು ಲಂಘಿಸಿ ನಡುನೀರಿನಲ್ಲಿ ಬಿದ್ದು ಮೀನು ಮೊಸಳೆಗೆ ಆಹಾರವಾದಂತಾಯಿತಯ್ಯ ಎನ್ನ ಬಾಳು. ಆದಿಯಲ್ಲಿ ನಿನ್ನ ಗರ್ಭಾಂಬುಧಿಯಲ್ಲಿ ಜನಿಸಿ ನಿನ್ನ ನೆನಹಿಲ್ಲದೆ ಇಷ್ಟಲಿಂಗವನರಿಯದ ಪರಮ ಕಷ್ಟಜೀವಿಗಳ ಪ್ರಾಣಲಿಂಗವನರಿಯದ ಪರಮಪಾತಕರ ಭಾವಲಿಂಗವನರಿಯದ ಭವಕ್ಕೊಳಗಾದ ಹುಲುಮಾನವರ ತಂದೆ-ತಾಯಿ ಬಂಧು-ಬಳಗವೆಂದು ಭಾವಿಸಿದ ಬಲು ಪಾತಕವೆನ್ನನಂಡಲೆದು, ಅಮರ್ದಪ್ಪಿ ಅಗಲದ ಕಾರಣ ನಿಂದ ಠಾವಿಂಗೆ ನೀರ್ದಳಿವರಯ್ಯ ಕುಳಿತ ಠಾವಿಂಗೆ ಹೋಮವನಿಕ್ಕಿಸುವರಯ್ಯ ನಾನು ಬಂದ ಬಟ್ಟೆಯೊಳಗೋರ್ವರು ಬಾರರಯ್ಯ. ಕಾಲನಾಳಿಂಗೆ ಕಾಲ್ದುಳಿಯಾದೆನಯ್ಯ. ಶುನಕ ಸೂಕರಾದಿಗಳ ಬಸಿರಲ್ಲಿ ಬರುವಂತೆ ಮಾಡಿತಯ್ಯ ಎನ್ನ ಮಾಯೆ. ಓರ್ವರಿಗೆ ಹುಟ್ಟಿ ಮತ್ತೋರ್ವರಿಗೆ ಅಪ್ಪಾ ಎಂಬ ನಾಣ್ಣುಡಿಯ ದೃಷ್ಟವೆನಗಾಯಿತಯ್ಯ ಗುರುವೆ. ಈ ದೋಷಮಂ ಕರುಣದಿಂ ಕಳೆದು ಶುದ್ಧನಂ ಮಾಡಿ. ನಿನ್ನನೇ ಜನನೀ ಜನಕರೆಂಬ, ನಿನ್ನ ಭಕ್ತರು ಬಂಧು ಬಳಗವೆಂಬ ಸುಜ್ಞಾನಮಂ ಕೊಟ್ಟು, ಜಾಗ್ರತ್ ಸ್ವಪ್ನ ಸುಷುಪ್ತಿಯಲ್ಲಿ ನಿನ್ನತ್ತಲೆನ್ನ ಮುಖವ ಮಾಡಿ, ಅಕ್ಕರಿಂದ ರಕ್ಷಿಪುದಯ್ಯ ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನ.