Index   ವಚನ - 23    Search  
 
ನಿಜಮುಕ್ತಿಗೆ ಸದಾ ಸಂಧಾನದಲ್ಲಿರಬೇಕೆಂದು ಶಿವಶರಣರು ನುಡಿಯುತ್ತಿಪ್ಪರು, ಆ ಸಂಧಾನದ ಹೊಲಬ ನಾನರಿಯೆ ಎನಗೆ ಮುಕ್ತಿಯಿಲ್ಲ. ಇನ್ನೇವೆನೆಂದು ಕಂಬನಿದುಂಬಿ ಕರಗುತಿಪ್ಪೆ ಮನವೇ. ಗುರು ಕೊಟ್ಟ ಸಂಧಾನವೆ ಕರಕಮಲದಲ್ಲಿ ಪ್ರಸನ್ನ ಪ್ರಸಾದಮಂ ಪ್ರತ್ಯಕ್ಷವಾಗಿ ತೋರುತ್ತಿದೆ. ಗುರು ಕೊಟ್ಟ ಸಂಧಾನವೆ ಎಂಟೆಸಳಿನ ಚೌದಳದ ಮಧ್ಯದಲ್ಲಿ ಹೊಂಗಳಶದಂತೆ ಥಳಥಳನೆ ಹೊಳೆಯುತ್ತಿದೆ. ಗುರುಕೊಟ್ಟ ಸಂಧಾನವೆ ಮುಪ್ಪುರದ ಮಧ್ಯದಲ್ಲಿ ರತ್ನ ಮಿಂಚಿನಂತೆ ಕುಡಿವರಿದು ಉರಿಯುತ್ತಿದೆ. ಗುರು ಕೊಟ್ಟ ಸಂಧಾನವೆ ಪಂಚಪತ್ರದ ಮಧ್ಯದಲ್ಲಿ ಬೆಳ್ದಿಂಗಳ ಲತೆಯಂತೆ ಬೀದಿವರಿದು ಬೆಳಗ ಬೀರುತ್ತಿವೆ ಈ ಪ್ರಕಾರದ ಬೆಳಗೆ ಮುಕ್ತಿಸಂಧಾನವಾಗಿ ಒಪ್ಪುತ್ತಿಹವು. ಇವನೆ ಕಣ್ದುಂಬಿ ನೋಡು ಇವನೆ ಮನದಣಿವಂತೆ ಹಾಡು ಇವನೆ ಅಪ್ಪಿ ಅಗಲದಿಪ್ಪುದೇ ನಿಜಮುಕ್ತಿ. ತಪ್ಪದು ನೀನಂಜಬೇಡ. ಗುರು ಕೊಟ್ಟ ಸಂಧಾನವಂ ಮರೆದು ಭಿನ್ನವಿಟ್ಟು ಲಕ್ಷಿಪರ ಸಂಧಾನವೆಲ್ಲಾ ಭವಸಂಧಾನವಯ್ಯ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನ.