Index   ವಚನ - 25    Search  
 
ನಿರ್ಗಮನಿಯಾದ ಶರಣಂಗೆ ಸಂಧಾನವಲ್ಲದೆ ಗಮನಿಯಾದ ಶರಣಂಗೆ ಅನುಗೊಳದೆಂಬ ಅಣ್ಣಗಳು ನೀವು ಕೇಳಿರೇ. ಸೂರ್ಯನು ರಥವನೇರಿ ಪದಾರ್ಥಂಗಳ ಚಬುಕುಮಾಡಿ ಮನೋವೇಗದಿಂ ಪಶ್ಚಿಮ ಸಮುದ್ರಕ್ಕೆ ದಾಳಿಯಿಡಲು ರವಿಕಿರಣಂಗಳು ಹಿಂದುಳಿದಿಪ್ಪವೆ? ಅದು ಕಾರಣ- ಪುಷ್ಪವಿದ್ದಲ್ಲಿ ಪರಿಮಳವಿಪ್ಪುದು. ಅಂಗವಿದ್ದಲ್ಲಿ ಲಿಂಗವಿಪ್ಪುದು. ಲಿಂಗವಿದ್ದಲ್ಲಿ ಆ ಲಿಂಗದ ಮೇಲೆ ಮನವಿಪ್ಪುದು. ಲಿಂಗದ ಮೇಲೆ ಮನವಿಪ್ಪಲ್ಲಿಯೇ ಶರಣ. ಆ ಶರಣ ನಡೆದಲ್ಲಿಯೇ ಉರಿವಗ್ನಿಯ ಮೇಲೆ ತಂಗಾಳಿ ಬೀಸಿದಂತೆ. ತ್ರಿಪುಟಿಯ ಮೇಲೆ ಚಿದ್ಭೆಳಗು ಓಲಾಡುತ್ತಿದೆ. ಆ ಶರಣ ನೋಡುವಲ್ಲಿಯೇ ಪ್ರಣವದ ಬಳ್ಳಿ ಮನವ ಸುತ್ತುತ್ತಿದೆ. ಆ ಶರಣ ನೋಡುವಲ್ಲಿಯೇ ಪಂಚವರ್ಣಂಗಳ ಸ್ವರೂಪು ಲಿಂಗಾರ್ಪಿತವಾಗುತ್ತಿದೆ. ಶರಣ ಕುಂಭಿಸುವಲ್ಲಿಯೇ ಓಂಕಾರ ಒಡಗೂಡುವುದಯ್ಯ. ಶರಣ ರೇಚಿಸುವಲ್ಲಿಯೇ ಪಂಚಾಕ್ಷರಂಗಳು ಎಡೆಯಾಡುತ್ತಿವೆ. ಶರಣ ಸುಳಿವಲ್ಲಿಯೇ ಹಲವು ಪ್ರಕಾರದ ವಸ್ತುಗಳ ತನುಸೋಂಕು ಲಿಂಗಮನವ ತುಂಬುತ್ತಿದೆ. ಇದು ಕಾರಣ ತೋಂಟದಾರ್ಯನ ಕರುಣಪ್ರಸಾದಮಂ ಪಡೆದು ತತ್ವಸ್ವರೂಪ ಧ್ಯಾನ ಧಾರಣ ಅರ್ಪಿತಾವಧಾನವನರಿದ ಶರಣಂಗೆ ಗಮನಾಗಮನವೆಂಬುಭಯವುಂಟೆ? ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನ.