Index   ವಚನ - 44    Search  
 
ಲೋಕದ ನಚ್ಚಮಚ್ಚನೆ ನೀಗಿ ನಿಚ್ಚಟನಾಗಿ ಜ್ಞಾನ ಕ್ರೀಗಳಿಂದಾಚರಿಸಿ ಅಂಗಲಿಂಗದ ಸಂಬಂಧಿಗಳಾದ ಶಿವಲಿಂಗಮೋಹಿಗಳು ನೀವು ಕೇಳಿರಯ್ಯ. ಶರಣರು ಮುಕ್ತಿಪುರಕ್ಕೆ ಹೋಗುವ ಬಟ್ಟೆಯ ಬೆಡಗು ಬಿನ್ನಾಣದ ಪರಿಯ. ಆ ಮುಕ್ತಿಪುರಕ್ಕೆ ಹೋಗುವ ಹಾದಿಯಲ್ಲಿ ಒಂದು ಪಂಚವರ್ಣದ ಕಣ್ಣು ಮನಕ್ಕೆ ಮುಟ್ಟದ ಮಹಾಪಟ್ಟಣವೊಂದೇ. ಆ ಪಟ್ಟಣವ ಕಟ್ಟಿದುದು ಮೊದಲಾಗಿ ಊರು ಹಾಳಾಗಿಪ್ಪುದು. ಆ ಪಟ್ಟಣದ ನಡುವೆ ಹೋಗುತಿಪ್ಪ ಹಾದಿಯಲ್ಲಿ ಅಹಂಕಾರ ಮಮಕಾರಂಗಳೆಂಬ ಎರಡು ಪಟ್ಟಣಂಗಳು ತುಂಬಿ ತುಳುಕುತ್ತಿವೆ. ಆ ಎರಡು ಪಟ್ಟಣಕ್ಕೆ ಹೋದ ಹಾದಿ ಹೆಬ್ಬಟ್ಟೆಗಳಾಗಿಪ್ಪವು. ಆ ಎರಡು ಪಟ್ಟಣದ ವಿದಿಕ್ಕಿನಲ್ಲಿ ಒಂದು ಭಕ್ತಿಪುರವಿದೆ. ಆ ಭಕ್ತಿಪುರಕ್ಕೆ ಹಾದಿಯಿಲ್ಲ.ಆ ಭಕ್ತಿಪುರಕ್ಕೆ ಹೋದಲ್ಲದೆ ಮುಂದಣ ಮುಕ್ತಿಪುರದ ಬಟ್ಟೆಯ ಕಾಣಬಾರದು. ಆ ಮುಂದಣ ಪಯಣಗತಿಯ ಸಂಚುವರಿಯುವ ಸಂಬಂಧಮಂ ಶರಣ ಮನದಲ್ಲಿ ತಿಳಿದುಆ ಹೆಬ್ಬಟ್ಟೆಗಳಲ್ಲಿ ಹೋದರೆ ಎಂಬತ್ತುನಾಲ್ಕು ಲಕ್ಷ ಪ್ರಕಾರದ ನರಮಂಡಲದಲ್ಲಿ ಸುಳಿವುದು ತಪ್ಪದೆಂದು ಅದಕ್ಕೆ ಹೇಹಮಂ ಮಾಡಿ ತಮ್ಮವರು ಹೋದ ನಸುದೋಯಲ ಬೆಂಬಳಿವಿಡಿದು ಹೋಗಿ ಭಕ್ತಿಪುರಮಂ ಕಂಡು ಆ ಭಕ್ತಿಪುರದ ನಡುವೆ ಹೋಗುತಿಪ್ಪ ಹಾದಿಯಲ್ಲಿ ಹೆಬ್ಬುಲಿ ಕರಡಿ ಕಳ್ಳ ರಕ್ಕಸಿ ಕರಿಘಟೆಯಿಪ್ಪ ಮಹಾಸರೋವರದ ಅರಣ್ಯವಿದೆ. ಆ ಸರೋವರದ ಮಧ್ಯದಲ್ಲಿ ಎಂಟುಕಲಶದ ಚೌಕಾಮಂಟಪದ ಸುವರ್ಣದ ದೇಗುಲವಿದೆ. ಆ ದೇಗುಲದಲ್ಲಿ ಮುಕ್ತಿರಾಜ್ಯಕ್ಕೆ ಪಟ್ಟುವ ಕಟ್ಟುವ ಸಮರ್ಥಿಕೆಯನುಳ್ಳ ಜಂಗಮಲಿಂಗವಿದೆ. ಆ ಜಂಗಮಲಿಂಗಮಂ ಶರಣ ಕಂಡು ಹರುಷಗೊಂಡು ಭಾವದಲ್ಲಿಯೇ ಷೋಡಶೋಪಚಾರ ಅಷ್ಟವಿಧಾರ್ಚನೆಗಳಿಂದ ಪೂಜೆಯಂಮಾಡಿ ತನ್ನ ಮನದಭೀಷ್ಟೆಯಂ ನೆನೆದಂತೆ ಮನದಲ್ಲಿ ಬೇಡಿ ದೇಹ ಮನ ಪ್ರಾಣಕುಳ್ಳ ಸಮಸ್ತ ಕರಣಾದಿ ಗುಣಗಳೆಲ್ಲಮಂ ಸುಟ್ಟು ಬೊಟ್ಟಿಕ್ಕಿ ನಿರ್ಮಲ ಸ್ವರೂಪನಾಗಿ ಅಲ್ಲಿಂದ ಮುಂದೆ ನಡೆವುತಿಪ್ಪಾಗ ಊರ್ಧ್ವದಿಕ್ಕಿನ ಆಕಾಶದಲ್ಲಿ ಅನೇಕ ಚೋದ್ಯವನೊಳಕೊಂಡಿಪ್ಪ ತ್ರಿಪುರಮಂ ಕಂಡು ಆ ತ್ರಿಪುರದ ಮೇಲೆ ಬ್ರಹ್ಮರಂಧ್ರವೆಂಬ ಕೈಲಾಸದ ಕಡೆಯ ಬಾಗಿಲೊಳಿಪ್ಪ ಐಕ್ಯಸ್ಥಲವೆನಿಸುವ ಆರುನೆಲೆಯ ಮಾಣಿಕ್ಯವರ್ಣದ ಉಪ್ಪರಿಗೆ ತಳಮಂ ಕಂಡು ಪತಿಯಿದ್ದ ಮನೆಯ ಬಾಗಿಲಂ ಸತಿ ಸಾರುವಂತೆ ಆ ಶರಣ ಆ ಉಪ್ಪರಿಗೆಯ ಬಾಗಿಲಂ ಸಾರೆ ಆ ಬಾಗಿಲಿನಲ್ಲಿ ಡಾಕಿನಿ ಶಾಕಿನಿ ರಾಕಿನಿ ಲಾಕಿನಿ ಕಾಕಿನಿ ಹಾಕಿನಿಯರೆಂಬ ಷಡ್ವಿಧಶಕ್ತಿಗಳಿಗೆ ಆದಿನಾಯಕಿಯಾಗಿಪ್ಪಳು, ಊರ್ಧ್ವಕುಂಡಲಿನಿಯೆಂಬ ಜ್ಞಾನಶಕ್ತಿ. ಆ ಶಕ್ತಿ ಆ ಬಾಗಿಲಿಗೆ ದ್ವಾರಪಾಲಕಿಯಾಗಿಪ್ಪಳು. ಅವಳು ಅಂಗರ ತಡೆವಳು ನಿರಂಗರ ಬಿಡುವಳೆಂಬುದ ಶರಣ ತನ್ನ ಮನದಲ್ಲಿ ತಾನೆ ತಿಳಿದು ಅಲ್ಲಿಪ್ಪ ಮಹಾಲಿಂಗಮಂ ಶರಣ ಮಂತ್ರಮಾಲೆಯಂ ಮಾಡಿ ಮನದಲ್ಲಿ ಧರಿಸಿ ಸೋಮ ಸೂರ್ಯರ ಕಲಾಪಮಂ ನಿಲಿಸಿ ಕುಂಭಮಂ ಇಂಬುಗೊಳಿಸಿ ಝೇಂ ಝೇಂ ಎಂದು ಝೇಂಕರಿಸುತಿಪ್ಪ ಪೆಣ್ದುಂಬಿಯ ನಾದಮಂ ಚಿಣಿಮಿಣಿ ಎಂದು ಸಣ್ಣರಾಗದಿಂದ ಮನವ ಸೋಂಕುತಿಪ್ಪ ವೀಣಾನಾದಮಂ ಲಿಂಗ ಲಿಂಗವೆಂದು ಕರೆವುತಿಪ್ಪ ಘಂಟಾನಾದಮಂ ಢಮ್ಮ ಢಮ್ಮ ಎನುತಿಪ್ಪ ಪೂರಿತವಾದ ಭೇರಿನಾದಮಂ ಚಿಟಿಲುಪಟಿಲು ಧಿಗಿಲು ಭುಗಿಲೆನುತಿಪ್ಪ ಮೇಘನಾದಮಂ ಓಂ ಓಂ ಎಂದು ಎಲ್ಲಿಯೂ ಎಡೆವಿಡದೆ ಉಲಿವುತಿಪ್ಪ ಪ್ರಣವನಾದಮಂ ಓಂ ಹ್ರಾಂ ಹ್ರೀಂ ಹ್ರೂಂ ಹ್ರೇಂ ಹ್ರೈಂ ಹ್ರೌಂ ಹ್ರಂ ಹ್ರಃ ಎಂದು ಬೆಳಗ ಬೀರುತಿಪ್ಪ ದಿವ್ಯನಾದಮಂ ಅರಣ್ಯ ಘೋಳಿಡುವಂತೆ ಹೂಂಕರಿಸುತಿಪ್ಪ ಸಿಂಹನಾದಮಂ ಈ ಪ್ರಕಾರದ ನಾದಂಗಳಂ ಶರಣ ಕೇಳಿ ಮನದಣಿದು ಹರುಷಂ ಮಿಕ್ಕು ಆ ಬಾಗಿಲು ದಾಂಟಿ ಪಶ್ಚಿಮ ದಿಕ್ಕಿಗೆ ಮುಖವಾಗಲೊಡನೆ ಚೌಕಮಧ್ಯದಲ್ಲಿ ವಜ್ರ ವೈಡೂರ್ಯ ಪುಷ್ಯರಾಗ ಗೋಮೇಧಿಕ ಇಂತಿವರೊಳಗಾದ ನವರತ್ನಂಗಳ ಕಂಭ ಬೋದಿಗೆ ಹಲಗೆಗಳಿಂದ ಅನುಗೈದು ತೀರಿಸಿದ ಮಹಾ ಶ್ರೀ ಗುರುವಿನ ಒಡ್ಡೋಲಗದ ಹಜಾರದ ಪ್ರಭೆಯು ಆಕಾಶವನಲೆವುತಿಪ್ಪುದಂ ಕಂಡು ಬಹಿರಾವರಣವ ಸೇರಿಪ್ಪ ಪ್ರಾಕಾರದ ಗೋಡೆಯ ಎರಡು ಹದಿನಾರು ಗೊತ್ತುಗಳಲ್ಲಿ (ಕೊತ್ತಳಗಳಲಿ) ಈಶಾನ ಪರ್ಜನ್ಯ ಜಯಂತರೊಳಗಾದ ಮೂವತ್ತೆರಡು ತಂಡದ ಅನಂತ [ವಾ]ಸ್ತುದೇವತೆಗಳ ಕಾವಲ ಅತ್ಯುಗ್ರಮಂ ಕಂಡು ಶರಣರ್ಗೆ ತಡೆಹಿಲ್ಲವೆಂಬುದಂ ತನ್ನ ಮನಜ್ಞಾನದಿಂದವೇ ಅರಿದು ಕಾವಲಾಗಿಪ್ಪ [ವಾ]ಸ್ತುದೇವತೆಗಳ ಕೃಪಾದೃಷ್ಟಿಯಿಂದ ಸಂತೈಸಿ ಮುಕ್ತಿಪುರಕ್ಕೆ ಮೂಲ ಸೂತ್ರವಾದ ಬ್ರಹ್ಮರಂಧ್ರದ ಪೂರ್ವ ದಿಕ್ಕಿನ ಚಂದ್ರಮಂಡಲದಲ್ಲಿಪ್ಪ ಬಾಗಿಲ ಬೀಗಮಂ ತೆಗೆದು ಶರಣನು ಒಳಹೊಗಲೊಡನೆ ಬಹಿರಾವರಣದ ವೀಥಿ ಓಲಗದೊಳಿಪ್ಪ ಹರಿ ಸುರ ಬ್ರಹ್ಮಾದಿ ದೇವತೆಗಳು ಮನು ಮುನಿ ಗರುಡ ಗಂಧರ್ವ ಇಂದ್ರ ಚಂದ್ರರೊಳಗಾದ ಅನಂತರೆಲ್ಲರು ಬೆದರಿ ಕೆಲಸಾರೆ ಸೋಮವೀಥಿಯೊಳಿಪ್ಪ ಅನಂತ ರುದ್ರರೊಳಗಾದ ಇಪ್ಪತ್ತನಾಲ್ಕುತಂಡದ ಅನಂತರು ಶಿವನ ಒಡ್ಡೋಲಗದ ವೈಭವವ ನಡೆಸುವ ಪರಿಚಾರಕರು ಬಂದು ಶರಣ ಲಿಂಗದೃಷ್ಟಿ ಸಂಧಾನವಾಗಲೆಂದು ಸಮ್ಮುಖವಂ ಮಾಡೆ ಸೂರ್ಯವೀಥಿಯೊಳಿಪ್ಪ ಉಮೆ ಚಂಡೇಶ್ವರ ನಂದಿಕೇಶ್ವರರೊಳಗಾದ ಹದಿನಾರುತಂಡದ ಅನಂತರುದ್ರರು ಬಂದು ಶರಣನ ಸನ್ಮಾನವಂ ಮಾಡೆ ಅಗ್ನಿವೀಥಿಯೊಳಿಪ್ಪ ವಾಮೆ ಜ್ಯೇಷ್ಠೆಯರೊಳಗಾದ ಎಂಟುತಂಡದ ಅನಂತಶಕ್ತಿಯರು ಬಂದು ಶರಣನ ಇದಿರ್ಗೊಳೆ ಕರ್ನಿಕಾವೀಥಿಯೊಳಗಿಪ್ಪ ಅಂಬಿಕೆ ಗಣಾನಿಯರೊಳಗಾದ ನಾಲ್ಕುತಂಡದ ಶಕ್ತಿಯರು ಬಂದು ಶರಣನ ಕೈವಿಡಿದು ಕರೆತರೆ ಈ ಸಿಂಹಾಸನಕ್ಕೆ ಮೇಲುಗದ್ದಿಗೆಯೆನಿಪ ಸಿಂಹಾಸನ ಶುಭ್ರವರ್ಣದ ಹತ್ತುನೂರುದಳವ ಗರ್ಭೀಕರಿಸಿಕೊಂಡು ಬೆಳಗುತಿಪ್ಪ ಒಂದು ಮಹಾಕಮಲ. ಆ ಕಮಲದಳಂಗಳೊಳಗಿಪ್ಪ ಪ್ರಣವ. ಆ ಪ್ರಣವ ಸ್ವರೂಪರಾದ ಬಸವಾದಿ ಅಸಂಖ್ಯಾತ ಪ್ರಮಥಗಣಂಗಳು ಆ ಪ್ರಮಥಗಣಂಗಳಿಗೆ ಶರಣಭಾವದಲ್ಲಿಯೇ ಸಾಷ್ಟಾಂಗವೆರಗಿ ನಮಸ್ಕಾರವ ಮಾಡೆ ಆ ಗಣಂಗಳು ಕೃಪಾದೃಷ್ಟಿಯಿಂದ ಶರಣನ ಮೈದಡವಿ ಅನಂತಕೋಟಿ ಸೋಮ ಸೂರ್ಯ ಕಾಲಾಗ್ನಿ ಮಿಂಚು ನಕ್ಷತ್ರಂಗಳು ತಮ್ಮ ತಮ್ಮ ಪ್ರಕಾಶಮಂ ಒಂದೇ ವೇಳೆ ತೋರಿದ ಬೆಳಗಿನೊಡ್ಡವಣೆ ಪಂಚಪತ್ರಂಗಳಾವರಣಂಗಳಾಗಿ ತೋರ್ಪ ಹದಿನಾರುದಳಂಗಳೊಳಿಪ್ಪ ಷೋಡಶಕಳಾಪುಂಜವೆನಿಸುವ ಪದ್ಮಿನಿ ಚಂದ್ರಿಣಿಯರೊಳಗಾದ ಷೋಡಶ ಲಾವಣ್ಯ ಶಕ್ತಿನಿಯರ ಬೆಳಗಂ ಕಂಡು ಆ ಬೆಳಗಿನೊಡ್ಡವಣೆ ಬಯಲಾಯಿತ್ತು. ಈ ಕರ್ಣಿಕಾಪ್ರದೇಶದ ಪಂಚಪತ್ರಂಗಳೊಳಗಿಪ್ಪ ಪಂಚಪ್ರಣವಂಗಳ ಬೆಳಗಂ ಕಂಡು ಆ ಲಾವಣ್ಯ ಶಕ್ತಿನಿಯರ ಬೆಳಗು ತೆಗೆದೋಡಿತ್ತು. ಕರ್ಣಿಕಾಗ್ರದೊಳು ನಿಜನಿವಾಸವಾಗಿ ಮೂರ್ತಿಗೊಂಡಿಪ್ಪ ನಿಷ್ಕಲಬ್ರಹ್ಮದ ಚರಣದಂಗುಲಿಯ ನಖದ ಬೆಳಗಂ ಕಂಡು ಆ ಪ್ರಣವಂಗಳ ಬೆಳಗು ತಲೆವಾಗಿದವು. ಇಂತಪ್ಪ ಘನಕ್ಕೆ ಘನವಾದ ಮಹಾಲಿಂಗವಂ ಶರಣಂ ನಿಟ್ಟಿಸಿ ಕಟ್ಟಕ್ಕರಿಂ ನೋಡಿ ಮನಂ ನಲಿದು ಆನಂದಾಶ್ರುಜಲಂ ಸುರಿದು ಪುಳಕಂಗಳುಣ್ಮೆ ರೋಮಾಂಚನಂ ಗುಡಿಗಟ್ಟೆ ಪ್ರಣವದ ನುಡಿ ತಡೆಬಡಿಸಿ ನಡೆ ದಟ್ಟಡಿಸುವ ಕಾಲದಲ್ಲಿ ಕರ್ಪೂರದ ಪುತ್ಥಳಿ ಬಂದು ಉರಿಯ ಪುತ್ಥಳಿಯನಾಲಂಗಿಸಿದಂತೆ ಶರಣಂ ಬಂದು ಆ ಘನಲಿಂಗಮಂ ಅಮರ್ದಪ್ಪಿ ಪುಷ್ಪ ಪರಿಮಳದಂತೆ ಏಕವಾಗಿ ಘನಲಿಂಗ ತಾನೆಯಾದ, ಮಹಾಗುರು ಸಿದ್ಧೇಶ್ವರಪ್ರಭುವಿನ ಚರಣಮಂ ನಾನು ಕರಸ್ಥಲದಲ್ಲಿ ಪಿಡಿದು ಪೂಜೆಯಂ ಮಾಡಲೊಡನೆ ಎನ್ನ ತನುವೇ ಪಂಚಬ್ರಹ್ಮ ಪ್ರಾಣವೇ ಪರಬ್ರಹ್ಮವಾಯಿತು. ಪ್ರವೃತ್ತಿಯ ಬಟ್ಟೆ ಹುಲ್ಲು ಹುಟ್ಟಿತು. ನಿವೃತ್ತಿಯ ಬಟ್ಟೆ ನಿರ್ಮಲವಾಯಿತು. ಉಯ್ಯಾಲೆಯ ಮಣೆ ನೆಲೆಗೆ ನಿಂದಂತೆ ಆದೆನಯ್ಯ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನ.